ಅನ್ನದಾನೇಶ್ವರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ
ದಾವಣಗೆರೆ, ಆ. 16 – ಸ್ವಾತಂತ್ರ್ಯ ಪೂರ್ವದಲ್ಲಿಯೇ ಶ್ರೀ ಅನ್ನದಾನೇಶ್ವರ ಸ್ವಾಮೀಜಿಗಳು ಅನ್ನ ದಾಸೋಹ, ಅಕ್ಷರ ದಾಸೋಹ, ಜ್ಞಾನ ದಾಸೋಹಕ್ಕೆ ಮಹತ್ವ ನೀಡಿದ್ದರು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಶ್ರೀ ಹಾಲಕೆರೆ ಅನ್ನದಾನೇಶ್ವರ ಸಾರ್ವಜನಿಕ ಸೇವಾ ಟ್ರಸ್ಟ್ ನಿಂದ ಇಂದು ನಡೆದ ಲಿಂ. ಶ್ರೀಗಳ 43ನೇ ಪುಣ್ಯಾರಾಧನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಆದರ್ಶ, ಪ್ರತಿಭಾನ್ವಿತ, ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹದಾಯಕ ಸನ್ಮಾನ ಮಾಡಿ ಪ್ರತಿಭಾ ಪುರಸ್ಕಾರವನ್ನು ಶಾಖಾ ಮಠವೂ ನೀಡುತ್ತಾ ಬಂದಿದೆ ಎಂದರು.
ಪ್ರತಿವರ್ಷ ಪುಣ್ಯರಾಧನೆ ಸಮಾರಂಭದಲ್ಲಿ ಜಿಲ್ಲೆಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿತ್ತು. ಈ ಬಾರಿ ಕೊರೋನ್ ಆದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಹ ಈ ಸೇವಾ ಸಮಿತಿಯವರು ಸರಳವಾಗಿ ಕಾರ್ಯಕ್ರಮ ಆಯೋಜಿಸಿ ಕೇವಲ ಮೂರು ವಿದ್ಯಾರ್ಥಿಗಳಿಗೆ ಪುರಸ್ಕರಿಸುವ ಕೆಲಸ ಮಾಡಿದ್ದಾರೆ.
ನಮಗೆ ಮುಖ್ಯವಾಗಿ ಉತ್ತಮ ಆರೋಗ್ಯ ಬೇಕು. ನಿಮಗೆ ಏನು ಬೇಕು ಎಂದು ಕೇಳಿದರೆ ಎಲ್ಲರೂ ನಮ್ಮ ಮನೆಗೆ, ನಮ್ಮ ಊರಿಗೆ, ನಮ್ಮ ದೇಶಕ್ಕೆ ಕೊರೊನಾ ಬಾರದಿರಲಿ, ಅದು ವಾಪಸ್ ಹೋಗಲಿ ಎಂದು ಕೇಳುತ್ತಾರೆ. ಈ ಮಹಾಮಾರಿ ಕೊರೊನಾ ಮಠಾಧೀಶರು ಮಂತ್ರಿಗಳು ಅಧಿಕಾರಿಗಳು ಯಾರನ್ನು ಬಿಟ್ಟಿಲ್ಲ ಪ್ರತಿಯೊಬ್ಬರೂ ಮನೆಯಲ್ಲಿಯೇ ನಿಂಬೆಹಣ್ಣಿನ ರಸ ಶುಂಠಿ ಕಷಾಯ ಸೇವಿಸಿದರೆ ಕೊರೊನಾದಿಂದ ಮುಕ್ತರಾಗಲು ಸಾಧ್ಯ ಎಂದರು.
ಪ್ರತಿಯೊಬ್ಬರೂ ಸಹ ಮಾಸ್ಕ್, ಸ್ಯಾನಿಟೈಸರ್ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದರಿಂದ ಕೊರೊನಾದಿಂದ ದೂರ ಇರಲು ಸಾಧ್ಯ ಎಂದರು ಹಿಂದಿನ ಪೂರ್ವಜರು ಹೇಳಿದಂತೆ ಹೊರಗಡೆಯಿಂದ ಬಂದಾಗ ಕೈಕಾಲು ತೊಳೆದು ಕೊಳ್ಳುವುದು ಮುಖ ತೊಳೆಯುವುದು ಹಿರಿಯರ ಹೇಳಿಕೆಗಳು ಈಗ ಕೊರೊನಾದಿಂದ ಎಲ್ಲರನ್ನೂ ಎಚ್ಚರಿಸುತ್ತಿವೆ ಎಂದು ತಿಳಿಸಿದರು..
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 619 ಅಂಕಗಳಿಸಿದ ತ್ರಿಶೂಲ್ ಶಾಲೆಯ ವಿದ್ಯಾರ್ಥಿನಿ ಮೇಘನ, ದ್ವಿತೀಯ ಪಿಯುಸಿಯಲ್ಲಿ ಶೇಕಡ 88ರಷ್ಟು ಅಂಕಗಳಿಸಿದ ಅಥಣಿ ಪಿಯು ಕಾಲೇಜಿನ ವೀರೇಶ್ ಹುದ್ದಾರ್, ಆರ್. ಜಿ. ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಅಮರಯ್ಯ ಗುರುವಿನಮಠ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು `ಇಂದಿನ ಸುದ್ದಿ’ ಪತ್ರಿಕೆ ಸಂಪಾದಕ ವೀರಪ್ಪ ಎಂ. ಬಾವಿ, ಟ್ರಸ್ಟ್ ಕಾರ್ಯದರ್ಶಿ ಎನ್. ಅಡಿವೆಪ್ಪ, ಶಿವಪುತ್ರಪ್ಪ ನಾಗರಾಜ್ ಯರಗಲ್ ಇತರರು ಇದ್ದರು.
ಶ್ರೀಮತಿ ಸುಜಾತ ಕಾರ್ಯಕ್ರಮ ನಿರೂಪಿಸಿದರು.