ಕೊರೊನಾ ತಡೆಗಾಗಿ ಮತ್ತಷ್ಟು ವ್ಯಾಪಕ ಪರೀಕ್ಷೆ

ದಾವಣಗೆರೆ, ಆ. 13 – ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಇದಕ್ಕೆ ಜನರು ಸಹಕರಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕರೆ ನೀಡಿದ್ದಾರೆ.

  ಬಗ್ಗೆ ವಿಡಿಯೋ ಸಂದೇಶವೊಂದನ್ನು ನೀಡಿರುವ ಅವರು, ಇದುವರೆಗೂ ಜಿಲ್ಲೆಯಲ್ಲಿ 114 ಜನರು ಕೊರೊನಾ ಹಾಗೂ ವಿವಿಧ ಕಾರಣಗಳಿಂದ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಈ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದು ಎಲ್ಲರಿಗೂ ಆಘಾತ ತಂದಿದೆ. ಇದನ್ನು ನಿಲ್ಲಿಸಲು, ವೈದ್ಯರು, ಉಪಕರಣಗಳಿಂದ ಮಾತ್ರ ಸಾಧ್ಯವಿಲ್ಲ. ಸೋಂಕು ಪ್ರಾರಂಭವಾದ ಹಂತದಲ್ಲೇ ಜನರನ್ನು ಗುರುತಿಸಿದರೆ ಉತ್ತಮ ಚಿಕಿತ್ಸೆ ಕೊಡಬಹುದು. ಇದರಿಂದ ಮುಂದೆ ಆಗಬಹುದಾದ ಗಂಡಾಂತರ ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಸರ್ವೈಲೆನ್ಸ್ ತಂಡಗಳನ್ನು ಹೆಚ್ಚು ಮಾಡಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ದಿನಕ್ಕೆ 2,500ರಿಂದ 3 ಸಾವಿರ ಮಾದರಿಗಳನ್ನು ಪಡೆದು ಪರೀಕ್ಷಿಸಲು ನಿರ್ದೇಶನ ಬಂದಿದೆ. ಅದನ್ನು ಮಾಡಲು ಜನರು ಸಹಕರಿಸಬೇಕು ಎಂದು ಬೀಳಗಿ ಹೇಳಿದ್ದಾರೆ.

ಅನೇಕ ಕಡೆಗಳಲ್ಲಿ ಜನರು ಸಹಕಾರ ನೀಡುತ್ತಿಲ್ಲ. ಪೊಲೀಸರ ಬಂದೋಬಸ್ತ್‌ನಲ್ಲಿ ಮಾದರಿಗಳನ್ನು ಸಂಗ್ರಹಿಸಬೇಕಾಗಿ ಬಂದಿದೆ. ನಾವು ಜನರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಹಾಗೂ ಜನರ ಜೀವ ರಕ್ಷಿಸಲು ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಸರ್ವೈಲೆನ್ಸ್ ಹಾಗೂ ಪರೀಕ್ಷೆ ಮಾಡುತ್ತಿದ್ದೇವೆ. ಈ ತಂಡಗಳು ಬಂದಾಗ ತೊಂದರೆ ನೀಡದೇ ಬೇಗ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪಾಸಿಟಿವ್ ಬಂದರೂ ಹೆದರಬೇಕಿಲ್ಲ. ನಾವು ರಕ್ಷಣೆ ಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ 4 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣ ಬಂದರೂ ಸುಮಾರು 3 ಸಾವಿರ ಜನರನ್ನು ಗುಣಮುಖರನ್ನಾಗಿ ಕಳಿಸಿದ್ದೇವೆ. ಕೊರೊನಾ ಬಂದ ತಕ್ಷಣ ಯಾರೂ ಸಾಯುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ನಿಮ್ಮ ಅಕ್ಕ ಪಕ್ಕದ ಮನೆಯಲ್ಲಿ ಯಾರಾದರೂ ಸೋಂಕಿನ ಶಂಕಿತರು ಇದ್ದರೆ ಆ ಬಗ್ಗೆಯೂ ಮಾಹಿತಿ ನೀಡಬೇಕು. ಸೋಂಕು ಹರಡುವುದನ್ನು ತಡೆಯಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯ್ತಿ ಹಾಗೂ ಪೊಲೀಸ್ ತಂಡಗಳ ಜೊತೆ ಕೈ ಜೋಡಿಸಬೇಕು. ಹಾಗಾದಲ್ಲಿ ನಾವು ಕೊರೊನಾ ವಿರುದ್ಧದ ಯುದ್ಧದಲ್ಲಿ ಗೆಲ್ಲಬಹುದು ಎಂದವರರು ಹೇಳಿದ್ದಾರೆ.

error: Content is protected !!