ಹರಪನಹಳ್ಳಿ : ವಿಹೆಚ್‌ಪಿ ಪ್ರತಿಭಟನೆ
ಹರಪನಹಳ್ಳಿ, ಆ.13- ದೇಶದ ಆಸ್ತಿ – ಪಾಸ್ತಿಗೆ ಧಕ್ಕೆ ತರುವವರಿಗೆ ಹಾಗೂ ಅತ್ಯಾಚಾರಿಗಳಿಗೆ ಕಠಿಣ ಹಾಗೂ ಬಹಿರಂಗ ಶಿಕ್ಷೆ ನೀಡುವ ಕಾಯ್ದೆಗಳನ್ನು ಕೂಡಲೇ ಜಾರಿಗೆ ತರಬೇಕೆಂದು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುವರ್ಣಮ್ಮ ಆರುಂಡಿ ನಾಗರಾಜ ಒತ್ತಾಯಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಧಾರವಾಡ ಜಿಲ್ಲೆಯ ಅತ್ಯಾಚಾರ ಪ್ರಕರಣ ಹಾಗೂ ಬೆಂಗಳೂರಿನ ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ದೊಂಬಿ, ಬೆಂಕಿ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದವರ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಬಿಜೆಪಿ ಮುಖಂಡ ಓಂಕಾರಗೌಡ ಮಾತನಾಡಿ, ಎಲ್ಲಾ ಸಂಘಟನೆಗಳು ರಾಷ್ಟ್ರ ವಿರೋಧಿ ಚಟುವಟಿಕೆ ಮಾಡುತ್ತಿರುವವರ ವಿರುದ್ಧ ತಕ್ಕ ಪಾಠ ಕಲಿಸಲು ಒಗ್ಗೂಡಿ ಸರ್ಕಾರಕ್ಕೆ ಬೆಂಬಲ ನೀಡಬೇಕು. ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಮಾಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ನೊಂದವರಿಗೆ ಪರಿಹಾರ ನೀಡುವ ಉತ್ತರ ಪ್ರದೇಶದಂತಹ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಹೆಚ್.ಎಂ. ಜಗದೀಶ್ ಮಾತನಾಡಿ, ಅತ್ಯಾಚಾರಿ ಬಸಿರ್‌ಗೆ ಗಲ್ಲು ಶಿಕ್ಷೆಯಾಗಬೇಕು. ಬೆಂಗಳೂರಿನ ಡಿಜಿ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಘಟನೆಗಳು ಪೂರ್ವ ನಿಯೋಜಿತ ಕೃತ್ಯವಾಗಿವೆ. ಸಮಾಜಕ್ಕೆ ಆಮಾಯಕರಿಗೆ ಶಿಕ್ಷೆಯಾಗಿದೆ. ಘಟನೆಗೆ ಕಾರಣವಾಗಿರುವ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡರಾದ ಅಶೋಕ ಹಿಂದುಸ್ತಾನಿ, ಭರತ ಬೂದಿ, ಕೆ.ಸಂಗಮೇಶ್, ಪವನ ಪಾಟೀಲ್, ಎಂ. ವಾಗೀಶ್, ಡಿ.ಹನುಮಂತ, ಆರ್.ರವಿನಾಯ್ಕ್, ಪ್ರವೀಣ, ಲಿಂಗನಗೌಡ ಹಾಗೂ ಇತರರು ಭಾಗವಹಿಸಿದ್ದರು.