ದಾವಣಗೆರೆ, ಡಿ.29- ಸಾರ್ವಜನಿಕರ ಸಮಸ್ಯೆಗಳಿಗೆ ತತ್ ಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ `ಮನೆಯ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮ ನಡೆಯುತ್ತಿದ್ದು, ಈ ವಿಶೇಷ ಕಾರ್ಯಕ್ರಮವು 15, 16ನೇ ವಾರ್ಡುಗಳ ದೇವರಾಜ ಅರಸು ಬಡಾವಣೆ ಮತ್ತು ವಿನೋಬನಗರದಲ್ಲಿ ಯಶಸ್ವಿಯಾಗಿ ನಡೆಯಿತು.
ಆಸ್ತಿ ತೆರಿಗೆ ಮತ್ತು ನೀರಿನ ದರದಿಂದ 7,47,203 ರೂ. ಸಂಗ್ರಹವಾಗಿದ್ದು, 6 ಉದ್ದಿಮೆಗಳಿಗೆ ಸ್ಥಳದಲ್ಲಿಯೇ ಪರವಾನಿಗೆ ವಿತರಿಸಿದ್ದು, ಇದರಿಂದ 5,400 ರೂ. ಸೇರಿ ಹಣ ಒಟ್ಟು 7,52,603 ರೂ. ಸಂಗ್ರಹವಾಗಿದೆ ಎಂದು ಮಹಾಪೌರರಾದ ಬಿ.ಜಿ.ಅಜಯ್‍ಕುಮಾರ್ ತಿಳಿಸಿದ್ದಾರೆ.
ಈ ವೇಳೆ 15ನೇ ವಾರ್ಡ್‍ನಲ್ಲಿ 25 ಲಕ್ಷ ರೂ. ಮೊತ್ತದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಮತ್ತು 16ನೇ ವಾರ್ಡ್ ವಿನೋಬನಗರದಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು ಎಂದವರು ಹೇಳಿದರು.
ಜನನ/ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಿಗೆ, ಬೀದಿ ದೀಪ, ಇಂಜಿನಿಯರ್ ಶಾಖೆ ಮತ್ತು ಇತರೆ ದೂರುಗಳಿಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಂದಿದ್ದು, ಸೂಕ್ತ ದಾಖಲಾತಿಗಳನ್ನು ಪಡೆದು ಸ್ಥಳದಲ್ಲಿಯೇ ಕೆಲಸ ಮಾಡಿಕೊಡಲಾಗುತ್ತಿದೆ. ವಾರದಲ್ಲಿ ಮೂರು ದಿನ ನಿಗದಿ ಪಡಿಸಿದ ವಾರ್ಡ್‍ಗಳಿಗೆ ಭೇಟಿ ನೀಡುತ್ತಿದ್ದು, ಆಯ ವಾರ್ಡ್‍ನ ಸ್ಥಳೀಯರಿಂದ ಉತ್ತಮ ಬೆಂಬಲ ಮತ್ತು ಪ್ರತಿಕ್ರಿಯೆ ಪಡೆಯುತ್ತಿದ್ದೇವೆ. ಈ ವಿನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಿ, ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅಜಯ್‍ಕುಮಾರ್ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ.ವೀರೇಶ್, ವಿರೋಧ ಪಕ್ಷದ ನಾಯಕರೂ ಆದ 16ನೇ ವಾರ್ಡ್‍ನ ಸದಸ್ಯ ಎ.ನಾಗರಾಜ್, 15ನೇ ವಾರ್ಡ್‍ನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ಸೇರಿದಂತೆ ಸಾರ್ವಜನಿಕರು ಹಾಗೂ ಇತರರಿದ್ದರು.