ಕೊರೊನಾ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಸಾರ್ವಜನಿಕರ ಹಣ ಲೂಟಿ

ಕಿಡಿ ಕಾರಿದ ಹರಿಹರದ ಶಾಸಕ ಎಸ್. ರಾಮಪ್ಪ

ಹರಿಹರ, ಡಿ.28- ದೇಶದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಕೊರೊನಾ  ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡಲು ಹೊರಟಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ 136ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರದಲ್ಲಿ ಇತ್ತೀಚೆಗೆ ಕೊರೊನಾ ಹೆಸರನ್ನು ಇಟ್ಟುಕೊಂಡು ಯಾವುದೇ ಹೊಸ ಕೆಲಸಗಳಿಗೆ ಆದ್ಯತೆ ನೀಡುವುದನ್ನು ನಿಲ್ಲಿಸಿ ಅದರಿಂದ ಬರುವ ಹಣವನ್ನು ಲೂಟಿ ಮಾಡುವುದಕ್ಕೆ ಪ್ರಾರಂಭಿಸಿದರು. ಇದರಿಂದಾಗಿ ರಾಜ್ಯದ ಜನರು ಸಾಕಷ್ಟು ಸಂಕಷ್ಟದ ಸ್ಥಿತಿ ತಲುಪಿದರು. ಎಸ್ಸಿ ಮತ್ತು ಎಸ್ಟಿ ಸೌಲಭ್ಯಗಳನ್ನು ಕಡಿತ ಮಾಡಿದರು.  ರೈತರಿಗೆ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರಲು ಹೊರಟಿದ್ದಾರೆ. ಗೋ ಹತ್ಯೆ ನಿಷೇಧ ಮಾಡಲು ಹೊರಟಿದ್ದಾರೆ. ಇವರಿಗೆ ಬಡವರು ನೆಮ್ಮದಿ ಜೀವನ ನಡೆಸುವುದು ಇಷ್ಟ ಇಲ್ಲ. ತಾವು ಅಧಿಕಾರಕ್ಕೆ ಬರಬೇಕು ಎಂದು ಅನೇಕ ಬಡವರಿಗೆ ನೋವು ಕೊಡುವಂತಹ ಕೆಲಸವನ್ನು ಮಾಡಲು ಹೊರಟಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬರೀ ಮಾತಿನಲ್ಲಿ ಜನರನ್ನು ಮೋಡಿ ಮಾಡಲು ಹೊರಟಿದ್ದಾರೆಯೇ ವಿನಃ ಬಡವರಿಗೆ ಯಾವುದೇ ರೀತಿಯ ಯೋಜನೆಯನ್ನು ಜಾರಿಗೆ ತರುತ್ತಿಲ್ಲ ಎಂದು ಶಾಸಕರು ಕಿಡಿ ಕಾರಿದರು. 

ಹಿಂದೆ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿಯವರ ಆಡಳಿತದ ಸಮಯದಲ್ಲಿ ಉಳುಮೆ ಮಾಡುವವನೇ ಭೂಮಿಯ ಒಡೆಯ ಎಂದು ಜಾರಿಗೆ ತಂದು ಅನೇಕ ಬಡವರ ಪರವಾದ ಕೆಲಸಗಳಿಗೆ ಆದ್ಯತೆ ನೀಡಿದರು ಮತ್ತು ಸಿದ್ದರಾಮಯ್ಯನವರ ಐದು ವರ್ಷಗಳ ಕಾಲ ಆಡಳಿತದಲ್ಲಿ ಬಡವರಿಗೆ 7 ಕೆ.ಜಿ. ಅಕ್ಕಿ ವಿತರಣೆ ಮಾಡಿದರು. 

ಆದರೆ, ಬಿಜೆಪಿ ಅದನ್ನು 5 ಕೆ.ಜಿ ನೀಡುವ ಮೂಲಕ ಬಡವರು ತಿನ್ನುವ ಆಹಾರ ಕಸಿದುಕೊಂಡಿದೆ. ಬಿಜೆಪಿ ಸರ್ಕಾರ ಜಾತಿಯ ಮೇಲೆ ರಾಜಕೀಯ ಮಾಡುತ್ತಾ ಅಧಿಕಾರಕ್ಕೆ ಬಂದು ಜನರಿಗೆ ಬೇಕಾಗುವ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ದ್ಯಾಮಪ್ಪ ಕೊಕ್ಕನೂರು, ನಿಖಿಲ್ ಕೊಂಡಜ್ಜಿ, ಎಂ. ನಾಗೇಂದ್ರಪ್ಪ, ಟಿ.ಜೆ. ಮುರುಗೇಶಪ್ಪ,  ಎಲ್.ಬಿ. ಹನುಮಂತಪ್ಪ, ಅಭಿದಾಲಿ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಸಿದ್ದೇಶ್, ಮೆಹಬೂಬ್ ಬಾಷಾ, ಬಾಬುಲಾಲ್, ಬಾಲರಾಜ್ ಮಹಮ್ಮದ್ ಫೈರೋಜ್ ಮತ್ತಿತರರು ಹಾಜರಿದ್ದರು.

error: Content is protected !!