ಕೂಡ್ಲಿಗಿ, ಡಿ.25 – ಕೂಡ್ಲಿಗಿಯಲ್ಲಿ ಇಂದು ಜರುಗಿದ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ಜಲಮಂಡಳಿ ಮತ್ತು ಒಳಚರಂಡಿ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಲಾಯಿತು.
ಕೆಲ ಸದಸ್ಯರು ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ, ಕಳೆದ ಒಂದೂವರೆ ವರ್ಷಗಳ ಹಿಂದೆ ಪಟ್ಟಣದಲ್ಲಿ ಯುಜಿಡಿ ಕಾಮಗಾರಿಗೆ ಸಿಮೆಂಟ್ ರಸ್ತೆಗಳನ್ನು ಛಿದ್ರ ಛಿದ್ರಗೊಳಿಸಿದ್ದು, ನಂತರ ರಸ್ತೆಗಳನ್ನು ಈವ ರೆಗೂ ಸರಿಪಡಿಸಿಲ್ಲ, ಇದರಿಂದ ಪಾದಚಾರಿ, ವಾಹನ ಸವಾರರು ಹರಸಾಹಸ ಪಡುವಂತಾ ಗಿದೆ. ಶೀಘ್ರವೇ ರಸ್ತೆಗಳನ್ನು ದುರಸ್ತಿಗೊಳಿಸಿ ಎಂದು ಸದಸ್ಯರಾದ ಕಾಲ್ಚಟ್ಟಿ ಈಶಪ್ಪ ಹಾಗೂ ತಾಳಸ ವೆಂಕಟೇಶಪ್ಪ ಆಗ್ರಹಿಸಿದರು.
ಸದಸ್ಯ ಶುಕೂರ್ ಮಾತನಾಡಿ, ರಸ್ತೆ ನಿರ್ಮಾಣ ಸಂದರ್ಭದಲ್ಲಿ. ಒಳಚರಂಡಿಯ ಕೆಲಭಾಗ ಜಖಂಗೊಂಡಿದ್ದು ಇವರೆಗೂ ದುರಸ್ತಿಗೊಳಿಸಿಲ್ಲ, ಸಂಬಂಧಿಸಿದವರಿಗೆ ಸೂಚಿಸಿ ದುರಸ್ತಿಗೊಳಿಸಿ ಎಂದರು.
ಕಾಲ್ಚಟ್ಟಿ ಈಶಪ್ಪ ಮಾತನಾಡಿ, ರಾಜೀವ್ ಗಾಂಧಿ ನಗರದಲ್ಲಿ, ತುರ್ತಾಗಿ ಜಂಗಲ್ ಕಟಿಂಗ್ ಮಾಡಿಸಲು ಜೆಸ್ಕಾಂ ಇಲಾಖಾಧಿ ಕಾರಿಗೆ ಸೂಚಿಸಿದರು. ಅಭಿವೃದ್ಧಿಗೆ ಚರಂಡಿ ಮೇಲಿನ ಒತ್ತುವರಿ ತೆರವು ಅನಿವಾರ್ಯ, ಕಾರಣ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಸದಸ್ಯರಾದ ಸಿರಿಬಿ ಮಂಜುನಾಥ, ಹೆಚ್.ಎಮ್.ಸಚಿನ್ ಕುಮಾರ್ ಹಾಗೂ ಚಂದ್ರಶೇಖರ ಮಾತನಾಡಿ ದರು, ತುರ್ತಾಗಿ ಹಂದಿ, ಬಿಡಾಡಿ ದನ ಹಾಗೂ ಬೀದಿ ನಾಯಿಗಳ ನಿರ್ಮೂಲನೆ ಆಗಬೇಕೆಂದು ಒತ್ತಾಯಿಸಿದರು.
ತಮ್ಮ ವಾರ್ಡ್ ನಲ್ಲಿ ನೂತನ ಸಾರ್ವಜನಿಕ ಮಹಿಳಾ ಸಾಮೂಹಿಕ ಶೌಚಾಲಯ ನಿರ್ಮಾಣದ ನಂತರವಷ್ಟೆ, ಈಗಿರುವ ಶೌಚಾಲಯ ತೆರವು ಮಾಡಬೇಕೆಂದು ಸಿರಿಬಿ ಮಂಜುನಾಥ ತಿಳಿಸಿದರು. ನಮ್ಮ ವಾರ್ಡ್‍ಗಳಲ್ಲಿ ಚರಂಡಿಗಳು ತುಂಬಿವೆ. ಸ್ವಚ್ಚಗೊಳಿಸಿ, ಅಗತ್ಯ ಕಡೆಗಳಲ್ಲಿ ಚರಂಡಿ ನಿರ್ಮಿಸಿ ಎಂದು ಸದಸ್ಯ ಪೂರ್ಯಾನಾಯ್ಕ ಮತ್ತು ಸದಸ್ಯೆ ಶ್ರೀಮತಿ ಸರಸ್ವತಿ ಮುಖ್ಯಾಧಿಕಾರಿಗೆ ತಿಳಿಸಿದರು.
ಅಧ್ಯಕ್ಷರಾದ ಶ್ರೀಮತಿ ಎಮ್. ಶಾರದಾ ಬಾಯಿ, ಉಪಾಧ್ಯಕ್ಷೆ ಶ್ರೀಮತಿ ಊರಮ್ಮ ಹಾಗೂ ಮುಖ್ಯಾಧಿಕಾರಿ ವೇದಿಕೆಯಲ್ಲಿದ್ದರು. ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಸಭೆಯಲ್ಲಿದ್ದರು.