ದಾವಣಗೆರೆ, ಡಿ.24- ಸಫಾಯಿ ಕರ್ಮ ಚಾರಿಗಳಿಗೆ ಆಗಿರುವ ಗತಕಾಲದ ಅನ್ಯಾಯ ವನ್ನು ಮತ್ತು ಅಗೌರವದ ಬದುಕನ್ನು ಸರಿಪಡಿಸುವುದಕ್ಕೆ ಮತ್ತು ಗೌರವಯುತ ಬದುಕನ್ನು ನಡೆಸುವುದಕ್ಕೆ ಪುನರ್ವತಿ ಕಲ್ಪಿಸುವುದು ಅತ್ಯವಶ್ಯಕ. ಆದರೆ, ಇಂದಿಗೂ ಪುನರ್ವಸತಿ ಹಾಗೂ ಗೌರವಯುತ ಬದುಕು ಕಟ್ಟಿಕೊಳ್ಳಲು ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಶೋಚನೀಯ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು, ವಕೀಲರೂ ಆದ ಎಲ್.ಹೆಚ್. ಅರುಣಕುಮಾರ್ ಕಳವಳ ವ್ಯಕ್ತಪಡಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ-ಕರ್ನಾಟಕ, ಸಫಾಯಿ ಕರ್ಮಚಾರಿಗಳ ಸಮಿತಿ- ದಾವಣಗೆರೆ ಜಿಲ್ಲೆ, ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ-2013 ಕುರಿತು ನಿನ್ನೆ ಏರ್ಪಡಿಸಿದ್ದ ಜಾಗೃತಿ ಮತ್ತು ಜಿಲ್ಲಾ ಮಟ್ಟದ ನಾಯಕತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಲ ಹೊರುವ ಜಾಡಮಾಲಿಗಳೆಂಬ ಅನಿಷ್ಠ ಪದ್ದತಿಗಳನ್ನು ಸಮಾಜದಲ್ಲಿ ಇನ್ನಿಲ್ಲದಂತೆ ನಿರ್ಮೂಲನೆ ಮಾಡಲು ಮ್ಯಾನುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ-2013 ಜಾರಿಗೆ ತರಲಾಯಿತು. ಇಂದಿಗೂ ಮಲ ಹೊರುವ ಮತ್ತು ಬಾಚುವ ಪದ್ಧತಿ ಜೀವಂತವಾಗಿರುವುದು ದೇಶಕ್ಕೆ ದೊಡ್ಡ ಕಳಂಕವಾಗಿದೆ.
ಆಧುನಿಕ ಉಪಕರಣ ಬಳಸಿ, ಮಲದ ಗುಂಡಿಗಳನ್ನು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂಬ ನಿಯಮವಿದ್ದರೂ ಸಫಾಯಿ ಕರ್ಮಚಾರಿಗಳನ್ನು ಯಾವುದೇ ಸುರಕ್ಷತಾ ಕ್ರಮ ಇಲ್ಲದೇ ಮಲದ ಗುಂಡಿಗೆ ಇಳಿಸಿ ಮಲ ಬಾಚಲು ಹಚ್ಚಿ, ಅವರ
ಸಾವಿಗೆ ಕಾರಣವಾಗುತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಇನ್ನೂ ದೇವದಾಸಿ ಪದ್ಧತಿ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿಗಳಂತಹ ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿವೆ. ಇವು ತೊಲಗಬೇಕಾದರೆ, ಜನರ ಮನಸ್ಸು ಸ್ವಚ್ಛಗೊಳಿಸುವ ಕಾರ್ಯ ಮೊದಲಾಗಬೇಕು ಎಂದು ಅರುಣ್ ಕುಮಾರ್ ಹೇಳಿದರು.
ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ.ಬಿ. ಓಬಳೇಶ್ ಮಾತನಾಡಿ, ಮಲ ಬಾಚುವ ಭಂಗಿಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ ನಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಸಫಾಯಿ ಕರ್ಮಚಾರಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತ ಸಮಿತಿಯ ಮಂಜಮ್ಮ, ಕಾವಲು ಸಮಿತಿಯ ವಾಸುದೇವ, ಡಿ.ಎಸ್.ಬಾಬಣ್ಣ, ಹೆಚ್.ಮಲ್ಲೇಶ್, ಎನ್. ಹುಚ್ಚೆಂಗಪ್ಪ, ಅಂಜಿನಪ್ಪ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್ ಸೇರಿದಂತೆ ಇತರರು ಇದ್ದರು.