ದಾವಣಗೆರೆ, ಡಿ.21- ಎಪಿಎಂಸಿ ಸೆಸ್ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಲ್ಲಾಲರ ಸಂಘ, ಕರ್ನಾಟಕ ಮೆಕ್ಕೆಜೋಳ ವರ್ತಕರ ಸಂಘ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಜಮಾಯಿಸಿದ್ದ ದಲ್ಲಾಲರು ಮತ್ತು ವರ್ತಕರು ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಎಪಿಎಂಸಿ ಸೆಸ್ ಹೆಚ್ಚಿಸಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ನಿಯೋಗದ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಹಳೆಯ ಶುಲ್ಕವನ್ನೇ ಮುಂದುವರೆಸು ವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರ ಯಾವುದೇ ಮುನ್ಸೂಚನೆ ನೀಡದೇ, ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸದೇ ಏಕಾಏಕಿ ದಿಢೀರ್ ಶೇ. 0.35ರಷ್ಟಿದ್ದ ಸೆಸ್ ಅನ್ನು ಶೇ.1ಕ್ಕೆ ಏರಿಕೆ ಮಾಡಿರುವುದು ಸರ್ಕಾರದ ಅವೈಜ್ಞಾನಿಕ ನಡೆಯಾಗಿದೆ. ಇದು ನೇರವಾಗಿ ರೈತರ ಶೋಷಣೆಗೆ ಕಾರಣವಾಗಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇತ್ತೀಚಿನ ಎಪಿಎಂಸಿ ಕಾಯ್ದೆಗಳ ಅನ್ವಯ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಪ್ರಾಂಗಣ ಹೊರತು ಪಡಿಸಿ, ಬೇರೆಡೆ ಮಾರಾಟ ಮಾಡಿದರೆ ಅದಕ್ಕೆ ಶುಲ್ಕ ವಿನಾಯಿತಿ ಮಾಡಿ ಆದೇಶಿಸಿದೆ. ಇದರಿಂದ ಹೆಚ್ಚಿನ ರೈತರು, ವ್ಯಾಪರಸ್ಥರು ಶುಲ್ಕವಿಲ್ಲದ ಕಡೆಯಲ್ಲಿ ವ್ಯವಹರಿಸುವುದರಿಂದ ಮಾರುಕಟ್ಟೆಯಲ್ಲಿ ಹಣ ತೊಡಗಿಸಿರುವ ದಲ್ಲಾಳಿಗಳಿಗೆ ಮತ್ತು ಇದನ್ನೇ ವೃತ್ತಿಯನ್ನಾಗಿಸಿಕೊಂಡ ಹಮಾಲರು ಮತ್ತು ಕೂಲಿ ಕಾರ್ಮಿಕರು ಜೀವನ ನಡೆಸುವುದು ಕಷ್ಟ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ತಿಳಿಸಿದರು.
Click here to change this text