ಭದ್ರಾ ಅಚ್ಚುಕಟ್ಟಿನ ಯೋಜನೆಗೆ 400 ಕೋಟಿ ರೂ.ಗೆ ಪ್ರಸ್ತಾವನೆ

ಮಲೇಬೆನ್ನೂರು, ಡಿ.21- ಭದ್ರಾ ಅಚ್ಚುಕಟ್ಟಿನ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 400 ಕೋಟಿ ರೂ. ಅನುದಾನ ನೀಡುವಂತೆ ನೀರಾವರಿ ಸಚಿವರಾದ ರಮೇಶ್‌ ಜಾರಕಿಹೊಳಿ ಅವರಿಗೆ ಮನವಿ ಮಾಡಿದ್ದು, ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಭದ್ರಾ ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ತಿಳಿಸಿದ್ದಾರೆ.

ಮಲೇಬೆನ್ನೂರು ಸಮೀಪ ಭದ್ರಾ ನಾಲೆಗೆ ನಿರ್ಮಿಸುತ್ತಿರುವ ಸೇತುವೆ ಕಾಮ ಗಾರಿ ಮತ್ತು ಭದ್ರಾ ನಾಲಾ ನಂ. 3 ಉಪ ವಿಭಾಗ ವ್ಯಾಪ್ತಿಯ ಉಪಕಾಲುವೆಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳನ್ನು ಇಂದು ವೀಕ್ಷಿಸಿದ ಅವರು, ನಂತರ ಮಾತನಾಡಿದರು. 

ಇದುವರೆಗೆ ವಿವಿಧ ಕಾಮಗಾರಿಗಳಿಗೆ 22 ಕೋಟಿ ರೂ. ಅನುದಾನ ನೀಡುವಂತೆ ರೈತರು   ತಮ್ಮನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದಾರೆ. ನಾನು ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಚರ್ಚಿಸಿದಾಗ ತಕ್ಷಣ 5 ಕೋಟಿ ರೂ. ಅನುದಾನ ಬಿಡುಗ ಡೆಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

 ಕೊರೊನಾ ಕಾರಣದಿಂದಾಗಿ ನಾವು ನಿರೀಕ್ಷೆ ಮಾಡಿದಷ್ಟು ಅನುದಾನ ಸಿಗುವುದು ಕಷ್ಟವಾಗಿರುವುದರಿಂದ ಕಾಲುವೆಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ರೈತರೇ ಮಾಡಿಕೊಂಡು ಮಾದರಿಯಾಗಬೇಕೆಂದು ಪವಿತ್ರ ರಾಮಯ್ಯ ಮನವಿ ಮಾಡಿದರು.

ಭದ್ರಾ ಕಾಡಾ 12 ಜಿಲ್ಲೆಗಳನ್ನು ಒಳಗೊಂಡಿದ್ದು, 5 ಲಕ್ಷ ಹೆಕ್ಟೇರ್‌ ಅಚ್ಚುಕಟ್ಟು ಹೊಂದಿದೆ. ಮಲೇಬೆನ್ನೂರು ಮತ್ತು ದಾವಣಗೆರೆ ವಿಭಾಗಗಳ ಕೊನೆ ಭಾಗಕ್ಕೆ ನೀರಿನ ತೊಂದರೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಈ ಬೇಸಿಗೆ ಬೆಳೆಯ ಸಂದರ್ಭದಲ್ಲಿ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಪವಿತ್ರ ಅವರು ಕೊನೆ ಭಾಗದ ರೈತರಿಗೆ ಭರವಸೆ ನೀಡಿದರು. 

ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪಿಸುವ ತನಕ ನಿಮ್ಮನ್ನು ನಿದ್ದೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಸ್ಥಳದಲ್ಲಿದ್ದ ಇಇ ಚಿದಂಬರಲಾಲ್‌, ಎಇಇ ಸಂತೋಷ್‌ ಅವರಿಗೆ ಎಚ್ಚರಿಕೆ ನೀಡಿದರು.

ಭದ್ರಾ ನಾಲೆಗಳಿಗೆ ಅಕ್ರಮವಾಗಿ ಹಾಕಿಕೊಂಡಿರುವ ಪಂಪ್‌ಸೆಟ್‌ಗಳನ್ನು ತೆರವು ಮಾಡಿಸುವ ಅಧಿಕಾರ ನನಗಿಲ್ಲ. ಹಾಗಾಗಿ ಆ ಕೆಲಸ ನಮ್ಮಿಂದ ಸಾಧ್ಯವಿಲ್ಲ ಎಂದು ಪವಿತ್ರ ಅವರು, ಹೊಳೆಸಿರಿಗೆರೆಯ ಆರ್.ಟಿ. ಸೋಮಶೇಖರಪ್ಪ, ಎಂ. ತಿಪ್ಪೇರುದ್ರಪ್ಪ, ಪಾಲಾಕ್ಷಪ್ಪ ಅವರು ಮಾಡಿದ ಮನವಿಗೆ ಉತ್ತರಿಸಿದರು.

ಬರುವ ಜನವರಿ 2 ರಂದು ಭದ್ರಾ ಕಾಡಾ ಸಭೆ ನಡೆಸಿ, ಜನವರಿ 5 ರಿಂದ ಬೇಸಿಗೆ ಬೆಳೆಗಾಗಿ ಭದ್ರಾ ನಾಲೆಗಳಿಗೆ ನೀರು ಹರಿ ಸುವ ಸಾಧ್ಯತೆ ಇದೆ ಎಂದು ತಿಳಿಸಿದ ಪವಿತ್ರ ಅವರು, ಕೊನೆ ಭಾಗದ ರೈತರ ಒತ್ತಾಸೆಯಂತೆ ಮುಂದಿನ ಭದ್ರಾ ಕಾಡಾ ಸಭೆಯನ್ನು ಮಲೇಬೆನ್ನೂರು ಅಥವಾ ದಾವಣಗೆರೆಯಲ್ಲಿ ನಡೆಸುವುದಾಗಿ ಪ್ರಕಟಿಸಿದರು. 

ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಶಕ್ತಿ ನೀಡುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತೇನೆಂದು ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರೂ ಆದ ಎಪಿಎಂಸಿ ಸದಸ್ಯ ಜಿ. ಮಂಜುನಾಥ್‌ ಪಟೇಲ್ ಅವರ ಕೋರಿಕೆಗೆ ಪವಿತ್ರ ರಾಮಯ್ಯ ಸ್ಪಂದಿಸಿದರು.

ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿಯಬೇಕೆಂದರೆ ಮೊದಲು ಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಸಿ ಕಾಲುವೆಗಳ ದುರಸ್ತಿ ಕಾಮಗಾರಿಯನ್ನು ನಾಲೆಗೆ ನೀರು ಬಿಡುಗಡೆ ಮಾಡುವುದರ ಒಳಗಾಗಿ ಸಾಧ್ಯವಾದಷ್ಟು ಮಾಡಿಸಿ, ರೈತರಿಗೆ ನೆರವಾಗಿ ಎಂದು ಡಿಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ ಈ ವೇಳೆ ಒತ್ತಾಯಿಸಿದರು. 

ಅಲ್ಲದೆ ಕುಣೆಬೆಳಕೆರೆಯ ಅಂಜಿನಪ್ಪ ಕೂಡಾ ಕಾಲುವೆಗಳಲ್ಲಿ ಹೂಳು ತೆಗೆಸುವ ವಿಷಯ ಪ್ರಸ್ತಾಪಿಸಿದಾಗ ಕಾಡಾ ಅಧ್ಯಕ್ಷರು ಉತ್ತರಿಸಿ, ಇದೊಂದು ಬಾರಿ ಸಣ್ಣ ಸಣ್ಣ ಕಾಲುವೆಗಳಲ್ಲಿರುವ ಹೂಳನ್ನು ನೀವೇ ತೆಗೆಸಿ, ಸರ್ಕಾರದ ಜೊತೆ ಕೈ ಜೋಡಿಸಿ ಎಂದು ಕೇಳಿಕೊಂಡರು.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ. ವೀರಯ್ಯ, ಕಾರ್ಯದರ್ಶಿ ಪೂಜಾರ್‌ ಹಾಲೇಶ್‌, ಪೂಜಾರ್‌ ರಂಗನಾಥ್, ಕೊಕ್ಕನೂರು ಸೋಮಶೇಖರ್‌,
ಜಿಗಳಿಯ ಜಿ.ಎಂ. ಆನಂದಪ್ಪ, ಕುಣೆಬೆಳಕೆರೆ ರವಿ, ಕೆ.ಪಿ. ಗಂಗಾಧರ್‌ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!