ನೂತನ ಕೃಷಿ ಕಾಯ್ದೆ ಹಿಂಪಡೆಗೆ ಆಗ್ರಹ
ದಾವಣಗೆರೆ, ಡಿ.20- ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ (ಆರ್ ಕೆಎಸ್) ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂಥ್ ಆರ್ಗನೈಸೇಷನ್ (ಎಐಡಿವೈಒ) ವತಿಯಿಂದ ನಗರದ ಕೆ.ಆರ್. ಮಾರುಕಟ್ಟೆ ಬಳಿ ದೆಹಲಿ ಹೋರಾಟದಲ್ಲಿ ಮಡಿದ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಮೂಲಕ ಇಂದು ಪ್ರತಿಭಟನೆ ನಡೆಸಲಾಯಿತು.
ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ರೈತರ ವಿರುದ್ಧ ನಿರಂಕುಶವಾಗಿ ಮೂರು ಕರಾಳ ನೂತನ ಕಾನೂನುಗಳನ್ನು ಜಾರಿಗೆ ತಂದಿದ್ದು, ಎಪಿಎಂಸಿ ತಿದ್ದುಪಡಿ ಕಾಯ್ದೆ, ಬೆಲೆ ಭರವಸೆ ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳು ಅಗತ್ಯ ವಸ್ತುಗ ಳನ್ನು ಕಾಳಸಂತೆಯಲ್ಲಿ ದಾಸ್ತಾನು ಮಾಡುವುದಕ್ಕೆ ಅವಕಾಶ ನೀಡುತ್ತದೆ. ಅಲ್ಲದೆ ಇದು ಸರ್ಕಾರಿ ಕೃಷಿ-ಮಂಡಿಗಳನ್ನು ನಾಶ ಮಾಡುತ್ತದೆ. ಉದ್ಯಮಿಗಳಿಗೆ ಖಾಸಗಿ ಮಂಡಿಗಳನ್ನು ತೆರೆಯಲು ಅವಕಾಶ ನೀಡುತ್ತದೆ. ಆದ್ದರಿಂದ ಈ ನೀತಿಗಳನ್ನು ವಿರೋಧಿಸಿ ದೆಹಲಿಯ ಹೊರವಲಯದಲ್ಲಿ ಸುಮಾರು ಎರಡು ಕೋಟಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೊರೆಯುವ ಚಳಿಗೆ ಇಲ್ಲಿಯವರೆಗೆ ಸುಮಾರು 24ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ ಎಂದು ರೈತ-ಕೃಷಿ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷ ಸುನೀತ್ ಕುಮಾರ್ ತಿಳಿಸಿದರು.
ಈ ಕಾಯ್ದೆಗಳಿಂದ ಕಾರ್ಪೋರೇಟ್ ಕಂಪನಿಗಳ, ಬಹುರಾಷ್ಟ್ರೀಯ ಕಂಪನಿಗಳ ಮೋಸ, ಶೋಷಣೆಗೆ ರೈತರು ಬಲಿಯಾಗುತ್ತಾರೆ. ಗುತ್ತಿಗೆ ಕೃಷಿಯ ಹೆಸರಿನಲ್ಲಿ ರೈತರಿಂದ ಅವರ ಜೀವನೋಪಾಯದ ಏಕೈಕ ಸಾಧನವಾಗಿರುವ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ. ಕೃಷಿಯನ್ನು ಖಾಸಗಿ ಬೃಹತ್ ಕಂಪನಿಗಳ ನಿಯಂತ್ರಣಕ್ಕೆ ತರಲಾಗುತ್ತದೆ. ರೈತರು ಸಂಪೂರ್ಣವಾಗಿ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಕಂಪನಿಗಳ ಹಂಗಿನಲ್ಲಿ ನಡೆದಾಡುವ ಹೆಣಗಳಾಗಿ ಬಿಡುತ್ತಾರೆ. ಹೀಗೆ ಬಂಡವಾಳಶಾಹಿ ಉದ್ಯಮಿಗಳು ರೈತರ ಭೂಮಿಯನ್ನು ಖರೀದಿ ಮಾಡಿ ಸಮಸ್ತ ಸಂಪತ್ತಿನ ಒಡೆಯರಾಗುತ್ತಾರೆ. ಹಳ್ಳಿ-ಹಳ್ಳಿಗಳಲ್ಲಿರುವ ಕೃಷಿ ಸಂಪತ್ತನ್ನು ರೈತರಿಂದ ಕಿತ್ತು ಶ್ರೀಮಂತ ಬಂಡವಾಳಿಗರಿಗೆ ಧಾರೆಯೆರೆಯಲು ಸರ್ಕಾರ ಈ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಆಕ್ಷೇಪಿಸಿದರು.
ಈ ಸಂದರ್ಭದಲ್ಲಿ ಆರ್ ಕೆಎಸ್ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಅಣಬೇರು, ಎಐಡಿವೈಒ ಜಿಲ್ಲಾ ಸಂಚಾಲಕ ಮಧು ತೊಗಲೇರಿ, ಸಂಘಟನಾಕಾರ ಪರಶುರಾಮ್ ಇದ್ದರು.