ಹರಪನಹಳ್ಳಿ ತಾಲ್ಲೂಕಿನ ಬಾಪೂಜಿ ನಗರದಲ್ಲಿ ನಡೆದ ಘಟನೆ
ಹರಪನಹಳ್ಳಿ, ಡಿ.18 – ಹಣ ಪಡೆದು ಅವಿರೋಧ ಆಯ್ಕೆಗೆ ಬಿಡದೆ, ಗ್ರಾ.ಪಂ ಚುನಾವಣೆಗೆ ಸ್ಪರ್ಧೆ ಮಾಡಿದ್ದಕ್ಕೆ ಗ್ರಾಮದ ಮುಖಂಡರು ಗ್ರಾಮದಿಂದ ಬಹಿಷ್ಕಾರ ಹಾಕಿ ಮತ್ತು ಬೆದರಿಕೆ ಸಹ ಒಡ್ಡಿರುವ ಘಟನೆ ತಾಲ್ಲೂಕಿನ ಬಾಪೂಜಿ ನಗರದಲ್ಲಿ ಜರುಗಿದೆ.
ಈ ಕುರಿತು ತಹಶೀಲ್ದಾರ್ ಅವರಿಗೆ ಶುಕ್ರವಾರ ದೂರು ನೀಡಿರುವ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಚಂದ್ರನಾಯ್ಕ, ಮತ್ತು ಕಾರ್ಯದರ್ಶಿ ರಮೇಶನಾಯ್ಕ ಅವರು ಹರಪನಹಳ್ಳಿ ತಾಲ್ಲೂಕು ತೊಗರಿಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಪೂಜಿ ನಗರ ವಾರ್ಡ್ ಸಂಖ್ಯೆ 5 ಮತ್ತು 6ರಲ್ಲಿ ಸ್ಪರ್ಧಿಸಿದ್ದೇವೆ. ಆದರೆ, ನಮ್ಮ ಸ್ಪರ್ಧೆಗೆ ಊರಿನ ಮುಖಂಡರು ವಿರೋಧಿಸುತ್ತಿದ್ದಾರೆ.
ಈ ಚುನಾವಣೆಯನ್ನು ನಡೆಸದೆ ನಿಗದಿತ ಐದು ಸ್ಥಾನಗಳಿಗೆ ತಮಗೆ ಬೇಕಾದ ಐದು ಜನ ಅಭ್ಯರ್ಥಿಗಳನ್ನು ಗುರುತಿಸಿ ಅವರಿಂದ ತಲಾ 5.25 ಲಕ್ಷ ರು.ಗಳನ್ನು ಪಡೆದು ಅವಿರೋಧವಾಗಿ ಆಯ್ಕೆ ಮಾಡಲು ಗ್ರಾಮದ ಮುಖಂಡರು ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗ್ರಾಮದಲ್ಲಿ ನಡೆಯುತ್ತಿರುವ ಈ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಯನ್ನು ವಿರೋಧಿಸಿ ನಾವು ಸ್ಪರ್ಧೆ ಮಾಡುವ ಮೂಲಕ ಸಂವಿಧಾನಿಕ ಆಶಯವನ್ನು ಉಳಿಸಲು ಮುಂದಾಗಿದ್ದೇವೆ. ನಮ್ಮ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸುತ್ತಾ ನಮ್ಮ ಮತ್ತು ನಮ್ಮ ಕುಟುಂಬ ಹಾಗೂ ಈ ಚುನಾವಣೆಯಲ್ಲಿ ನಮಗೆ ನಾಮ ನಿರ್ದೇಶನದ ಸಹಿ ಹಾಕಿರುವ ಸೂಚಕರಿಗೂ ಗ್ರಾಮದಿಂದ ಬಹಿಷ್ಕಾರ ಹಾಕುವ ಮೂಲಕ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅವರು ಮನವಿ ಪತ್ರದಲ್ಲಿ ದೂರಿದ್ದಾರೆ.
ತಳ ಸಮುದಾಯದವರಿಂದಲೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರ ಸಂವಿಧಾನಕ್ಕೆ ಕೊಡಲಿ ಪೆಟ್ಟು ಹಾಕುವ ಎಲ್ಲಾ ಪ್ರಯತ್ನಗಳ ಪ್ರಥಮ ಹೆಜ್ಜೆಯಾಗಿದೆ. ತಾಲ್ಲೂಕು ದಂಡಾಧಿಕಾರಿಗಳಾದ ತಾವುಗಳು ನಮ್ಮ ಗ್ರಾಮದಲ್ಲಿ ಪ್ರಜಾಪ್ರಭುತ್ವದ ಉಳುವಿಗಾಗಿ ಗ್ರಾಮ ಪಂಚಾಯಿತಿಯಲ್ಲಿ ಸ್ಪರ್ಧಿಸಿರುವ ನಮಗೆ ಮತ್ತು ನಮ್ಮ ಕುಟುಂಬಕ್ಕೆ ಹಾಗೂ ನಮ್ಮ ಸೂಚಕರು ಹಾಗೂ ಅವರ ಕುಟುಂಬ ವರ್ಗದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬಾಪೂಜಿ ನಗರದ 5 ಮತ್ತು 6 ವಾರ್ಡ್‍ಗಳ ಕ್ಷೇತ್ರಗಳನ್ನು ಅತಿಸೂಕ್ಷ್ಮ ಕೇಂದ್ರವೆಂದು ಪರಿಗಣಿಸಿ, ಚುನಾವಣೆಯ ಎಲ್ಲಾ ಪ್ರಕ್ರಿಯೆಗಳಾದ ಸ್ಪರ್ಧೆ, ಪ್ರಚಾರ ಹಾಗೂ ಅಕ್ರಮ ರಹಿತ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡ ಬೇಕೆಂದು ಅವರು ಕೋರಿದ್ದಾರೆ. ತಾವುಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೆ, ಮುಂದೆ ಆಗುವ ಅನಾಹುತಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಎಲ್.ಎಂ.ನಂದೀಶ್ ಅವರು, ನಾನು ಮತ್ತು ಸಬ್ ಇನ್ ಸ್ಪೆಕ್ಟರ್ ನಾಳೆ ಶನಿವಾರ ಬಾಪೂಜಿ ನಗರಕ್ಕೆ ತೆರಳಿ ಸಭೆ ನಡೆಸಿ ಗ್ರಾಮದ ಮುಖಂಡರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆ ರೀತಿ ಮಾಡಬಾರದು ಎಂದು ತಿಳುವಳಿಕೆ ಹೇಳಿ ಮನವರಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಹೊಸಹಳ್ಳಿ ಮಲ್ಲೇಶ್, ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್ ಎಂ.ಸಂತೋಷ ಮತ್ತು ಇತರರು ಹಾಜರಿದ್ದರು.