ಮಲೇಬೆನ್ನೂರು, ಡಿ.16- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿನ ಬಾಪೂಜಿ ಹಾಲ್ ಕಟ್ಟಡವನ್ನು ಪುರಸಭೆಯ ಅನು ದಾನದಲ್ಲಿ ಪುನರ್ ನಿರ್ಮಾಣ ಮಾಡುವಂತೆ ಸದಸ್ಯ ಬಿ.ಎಂ.ಚನ್ನೇಶ್ ಸ್ವಾಮಿ ಅವರು ಪ್ರಸ್ತಾಪಿಸಿದಾಗ ಸದಸ್ಯರೆಲ್ಲರೂ ಸಮ್ಮತಿ ಸೂಚಿಸಿದರು.
ಮಂಗಳವಾರ ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ನಾಹೀದಾ ಅಂಜುಂ ಸೈಯದ್ ಇಸ್ರಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
2018-19 ಮತ್ತು 2019-2020ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ ಒಟ್ಟು 51.57 ಲಕ್ಷ ರೂ. ವೆಚ್ಚದಲ್ಲಿ ಘನ ತ್ಯಾಜ್ಯ ವಸ್ತು ನಿರ್ವಹಣೆ ಹಾಗೂ ಘನ ತ್ಯಾಜ್ಯ ವಸ್ತು ವಿಲೇವಾರಿ ಜಾಗದ ಕಾಮಗಾರಿಯ ಬದಲಿಗೆ ಬದಲಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ವಿಷಯ ಪ್ರಸ್ತಾಪಿಸಿದರು.
ಆಗ ಸದಸ್ಯ ಬಿ.ಎಂ.ಚನ್ನೇಶ್ ಸ್ವಾಮಿ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ವಿಶ್ರಾಂತಿ ಪಡೆದಿದ್ದ ಬಾಪೂಜಿ ಹಾಲ್ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು 14 ನೇ ಹಣಕಾಸಿನ 51.57 ಲಕ್ಷ ರೂ. ಅನುದಾನವನ್ನು ಬಳಸಿ ಎಂದಾಗ ಸಭೆ ಸರ್ವಾನುಮತದ ಒಪ್ಪಿಗೆ ನೀಡಿತು. ಈಗಿರುವ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿ ಅದಕ್ಕೆ `ಬಾಪೂಜಿ ಹಾಲ್’ ಎಂದೇ ನಾಮಕರಣ ಮಾಡಿ. ಅದರಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಸ್ಥಳೀಯ ಪತ್ರಕರ್ತರ ಮನವಿ ಮೇರೆಗೆ ಪತ್ರಿಕಾ ಭವನಕ್ಕೆ ಅವಕಾಶ ಮಾಡಿಕೊ ಡೋಣ ಎಂದು ಚನ್ನೇಶ್ ಸ್ವಾಮಿ ಹೇಳಿದರು.
ಈ ಹಿಂದೆ 9.30 ಲಕ್ಷ ರೂ. ವೆಚ್ಚದಲ್ಲಿ ಬಾಪೂಜಿ ಹಾಲ್ ನವೀಕರಣಕ್ಕೆ ಟೆಂಡರ್ ಕರೆಯಲಾಗಿತ್ತು. ಆದರೆ, ಆ ಹಣದಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂಬ ಕಾರಣಕ್ಕಾಗಿ ಟೆಂಡರ್ ರದ್ದು ಮಾಡಲಾಗಿದೆ ಎಂದು ಇಂಜಿನಿಯರ್ ನೌಷಾದ್ ಸಭೆಗೆ ತಿಳಿಸಿದರು.
ದರ ನಿಗದಿ : ಪಟ್ಟಣದಲ್ಲಿ ಸಕ್ಕಿಂಗ್ ಯಂತ್ರವನ್ನು ಬಳಕೆ ಮಾಡಿಕೊಳ್ಳುವ ಸಾರ್ವಜನಿಕರು 1 ಸಾವಿರ ರೂ. ನೀಡಬೇಕು ಮತ್ತು ಮುಕ್ತಿ ವಾಹನ ಬಳಸಿಕೊಳ್ಳುವವರು 500 ರೂ. ಬಾಡಿಗೆ ನೀಡಬೇಕೆಂಬ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
549 ಜನನ : ಪಟ್ಟಣದಲ್ಲಿ 2019 ಡಿಸೆಂಬರ್ನಿಂದ 2020 ನವೆಂಬರ್ವರೆಗೆ 282 ಗಂಡು ಮಕ್ಕಳು ಹಾಗೂ 267 ಹೆಣ್ಣು ಮಕ್ಕಳು ಜನನವಾಗಿವೆ ಮತ್ತು 138 ಜನ ಮರಣ ಹೊಂದಿದ್ದಾರೆ ಎಂದು ಆರೋಗ್ಯಾಧಿಕಾರಿ ಗುರುಪ್ರಸಾದ್ ಸಭೆಗೆ ಮಾಹಿತಿ ನೀಡಿದರು.
ಕಸ ಹಾಕಲು ಜಾಗದ ಸಮಸ್ಯೆ ಇದ್ದು, ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡೋಣ ಎಂದು ಸದಸ್ಯ ಬಿ.ಸುರೇಶ್ ಹೇಳಿದರು.ಮುಖ್ಯಾ ಧಿಕಾರಿ ಧರಣೇಂದ್ರಕುಮಾರ್ ಮಾತನಾಡಿದರು.
ಉಪಾಧ್ಯಕ್ಷರಾದ ಅಂಜಿನಮ್ಮ ವಿಜಯ ಕುಮಾರ್, ಸದಸ್ಯರಾದ ಎ.ಆರೀಫ್ ಅಲಿ, ಮಾಸ ಣಗಿ ಶೇಖರಪ್ಪ, ಮಹಾಂತೇಶ್ ಸ್ವಾಮಿ, ಯು ಸೂಫ್, ದಾದಾವಲಿ, ಸುಬ್ಬಿ ರಾಜಪ್ಪ, ಶಮೀಮ್ ಬಾನು, ಶ್ರೀಮತಿ ಮತಿ ಪಾನಿಪುರಿ ರಂಗನಾಥ್, ಶ್ರೀಮತಿ ಶಶಿಕಲಾ ಕೇಶವಾಚಾರಿ, ಸಾಕಮ್ಮ ರವಿ ಕುಮಾರ್, ಪುರಸಭೆ ಅಧಿಕಾರಿಗಳಾದ ಉಮೇಶ್, ದಿನಕರ್, ಗಣೇಶ್, ಪ್ರಭು, ನವೀನ್, ಇಮ್ರಾನ್, ಜಗದೀಶ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.