ದಾವಣಗೆರೆ,ಡಿ.16- ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ಜನರನ್ನು ಪ್ರೋತ್ಸಾಹಿ ಸುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಅರ್ಥಪೂರ್ಣ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ ಎಂದು ಉದ್ಯಮಿಯೂ ಆಗಿರುವ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಯಿಂ ದಾಗಿ ವೀಡಿಯೋ ಕಾನ್ಫರೆನ್ಸ್ – ವೆಬ್ ಕಾಸ್ಟ್ ಮೂಲಕ ಮೊನ್ನೆ ಏರ್ಪಾಡಾಗಿದ್ದ ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ನ ವರ್ಚುಯಲ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್ಥಿಕ ಅಡಚಣೆಗಳನ್ನು ನಿವಾರಿಸುವ ದಿಸೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ಸಾಲಗಾರರನ್ನು ಉತ್ತೇಜಿಸುವ ಸದುದ್ದೇ ಶದಿಂದ ತಮ್ಮ ಬ್ಯಾಂಕ್ ಪ್ರಸ್ತುತ ಜಾರಿಗೆ ತಂದಿದ್ದ `ಕನ್ನಿಕಾ ಅಕ್ಷಯ ಎಸ್.ಹೆಚ್.ಜಿ. -18′ ಯೋಜನೆಯು ನಿರೀಕ್ಷೆಗೂ ಮೀರಿ ಗುರಿ ಸಾಧಿಸಿರುವುದಾಗಿ ಅವರು ಹೇಳಿದರು.
ಈ ಯೋಜನೆಯಡಿಯಲ್ಲಿ 2020 ಸೆಪ್ಟೆಂಬರ್ ಅಂತ್ಯಕ್ಕೆ 4.44 ಕೋಟಿ ರೂ.ಗಳ ಸಾಲವನ್ನು ಸಣ್ಣ ಮತ್ತು ಅತೀ ಸಣ್ಣ ವ್ಯಾಪಾರಸ್ಥರಿಗೆ ನೀಡುವುದರ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದರೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೇಶದ ಆರ್ಥಿಕ ಚಟುವಟಿಕೆಯಲ್ಲಿ ಕನ್ನಿಕಾಪರಮೇಶ್ವರಿ ಬ್ಯಾಂಕ್ ಭಾಗಿಯಾಗಿದೆ ಎಂದು ಶ್ರೀನಿವಾಸಮೂರ್ತಿ ಹರ್ಷ ವ್ಯಕ್ತಪಡಿಸಿದರು
3.57 ಕೋಟಿ ರೂ. ಲಾಭ
2020 ಮಾರ್ಚ್ ಅಂತ್ಯಕ್ಕೆ ಕನ್ನಿಕಾ ಪರಮೇಶ್ವರಿ ಬ್ಯಾಂಕ್ 3.57 ಕೋಟಿ ರೂ. ಲಾಭ ಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ 2.22 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು, ಕಳೆದ ಸಾಲಿ ಗಿಂತ ಶೇ.7.46ರಷ್ಟು ಹೆಚ್ಚಾಗಿರುತ್ತದೆ.
– ಆರ್.ಜಿ. ಶ್ರೀನಿವಾಸಮೂರ್ತಿ, ಅಧ್ಯಕ್ಷರು, ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್
ಆಧಾರ ರಹಿತ ಸಾಲ : ಚನ್ನಗಿರಿ ಪಟ್ಟಣದ ಹೆಸರಾಂತ ಸಹಕಾರಿ ಸಂಸ್ಥೆ ತೋಟ ಉತ್ಪನ್ನಗಳ ಮಾರಾಟ ಸಂಸ್ಥೆ ಯೊಂದಿಗೆ ಕನ್ನಿಕಾಪರಮೇಶ್ವರಿ ಬ್ಯಾಂಕ್ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಂಡು, ಮಾರಾಟ ಸಂಸ್ಥೆಯ ಸದಸ್ಯ ರಿಗೆ ಆಧಾರ ರಹಿತ ಸಾಲವನ್ನು ನೀಡುವುದರ ಮೂಲಕ ತಮ್ಮ ಬ್ಯಾಂಕಿನ ಚನ್ನಗಿರಿ ಶಾಖೆಯನ್ನು ಲಾಭದಾಯಕದಲ್ಲಿ ಮುನ್ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಪ್ರಥಮ ಹಂತದ ಮಾತುಕತೆ ಪೂರ್ಣಗೊಂಡಿದ್ದು, ಬರುವ ಹೊಸ ವರ್ಷ 2021ರ ಜನವರಿಯಿಂದ ಜಾರಿ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.
ಪ್ರಗತಿದಾಯಕದಲ್ಲಿ ಮುನ್ನಡೆದಿರುವ ಬ್ಯಾಂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಂಕಿ -ಅಂಶಗಳನ್ನು ಸಭೆಗೆ ಒದಗಿಸಿದ ಶ್ರೀನಿವಾಸಮೂರ್ತಿ, ಬ್ಯಾಂಕಿನ ಸರ್ವತೋ ಮುಖ ಬೆಳವಣಿಗೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕ ರಿಸಿದವರನ್ನು ಪ್ರಸ್ತಾಪಿಸಿ, ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೋವಿಡ್ ನಲ್ಲೂ ಪ್ರಗತಿ : ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ವೈರಸ್ ಸಂದರ್ಭದಲ್ಲೂ ಕನ್ನಿಕಾಪರಮೇಶ್ವರಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಿದ್ದು, ಇದು ಸದಸ್ಯರು ಮತ್ತು ಗ್ರಾಹಕರು ತಮ್ಮ ಬ್ಯಾಂಕ್ ಮೇಲಿಟ್ಟಿರುವ ಪ್ರೀತಿ – ವಿಶ್ವಾಸ – ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬ್ಯಾಂಕಿನ ಹಿರಿಯ ನಿರ್ದೇಶಕರಲ್ಲೊಬ್ಬರಾದ ಆರ್.ಎಲ್. ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಗೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಅವರು, ತಮ್ಮ ಬ್ಯಾಂಕ್ ಸದೃಢವಾದ ಸಂಸ್ಥೆ ಎಂದು ಹಲವಾರು ಉದಾಹರಣೆಗಳೊಂದಿಗೆ ಪ್ರತಿಪಾದಿಸಿದರು. ಈ ಬ್ಯಾಂಕ್ ಪ್ರಗತಿಯಲ್ಲಿ ಸಾಗಲು ಸದಸ್ಯರು ಮತ್ತು ಠೇವಣಿದಾರರ ಸಹಕಾರ – ಪ್ರೋತ್ಸಾಹ, ಸಿಬ್ಬಂದಿ ವರ್ಗದವರ ಪರಿಶ್ರಮ, ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಇಚ್ಛಾಶಕ್ತಿ ಕಾರಣ ಎಂದು ತಿಳಿಸಿ, ಕೃತಜ್ಞತೆ ಸಲ್ಲಿಸಿದರು.
ಬ್ಯಾಂಕಿನ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಶ್ರೀಮತಿ ಆರ್.ಎನ್. ಸುಜಾತ, ನಿರ್ದೇಶಕರುಗಳಾದ ಕೆ.ಎಸ್. ಸತೀಶ್, ಎನ್. ಕಾಶಿನಾಥ್, ಕೆ.ಎನ್. ಅನಂತರಾಮ ಶೆಟ್ಟಿ, ಎ.ಎಸ್. ಸತ್ಯನಾರಾಯಣಸ್ವಾಮಿ, ಕೆ.ವಿ. ಮಂಜುನಾಥ್, ಜೆ. ರವೀಂದ್ರ ಗುಪ್ತ, ಬಿ.ಎಸ್. ಶಿವಾನಂದ್, ವೈ.ಬಿ. ಸತೀಶ್, ಪಿ.ಎಸ್. ರಾಘವೇಂದ್ರ ಶೆಟ್ಟಿ, ಶ್ರೀಮತಿ ಕೆ.ಎಂ. ಗೀತಾ ರಾಮ್, ಸಿಎ ಜಿ. ಶ್ರೀಧರ್, ಆರ್. ನಾಗರಾಜ ಶೆಟ್ಟಿ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕವಿತಾ ಮತ್ತು ಜ್ಯೋತಿ ಅವರುಗಳು ಪ್ರಾರ್ಥನೆ ಸಲ್ಲಿಸಿದರು. ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಪಡಗಲ್ ವಂದಿಸಿದರು.
ಸಹಾಯಕ ಪ್ರಧಾನ ವ್ಯವಸ್ಥಾಪಕ ಭೀಮಾನಂದ ಶೆಟ್ಟಿ, ಶಾಖಾ ವ್ಯವಸ್ಥಾಪಕರುಗಳಾದ ಪಿ.ವಿ. ಪ್ರಸಾದ್, ಎಸ್.ಆರ್. ವಿಜಯಕುಮಾರ್, ಎನ್. ಪ್ರಸಾದ್ ಅವರುಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.