ದಾವಣಗೆರೆ, ಡಿ. 16- ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿರೂಪಕರಾಗಿ ನಡೆಸಿಕೊಡುವ, ಕಿರುತೆರೆಯ ಅತ್ಯಂತ ಜನಪ್ರಿಯ ‘ಕೌನ್ ಬನೇಗಾ ಕರೋಡ್ ಪತಿ’ ರಿಯಾಲಿಟಿ ಗೇಮ್ ಶೋ ಅದೆಷ್ಟೋ ಮಂದಿಯನ್ನು ಲಕ್ಷಾಧೀಶರನ್ನಾಗಿ, ಕೆಲವರನ್ನು ಕೋಟ್ಯಾಧಿಪತಿಗಳನ್ನಾಗಿಸಿದೆ.
ಇತ್ತೀಚೆಗೆ ನಡೆದ ಸ್ಟೂಟೆಂಡ್ ಸ್ಪೆಷಲ್ ವೀಕ್ ಕಾರ್ಯಕ್ರಮದಲ್ಲಿ ಉಡುಪಿಯ ಶಾಲೆಯೊಂದರಲ್ಲಿ ಓದುತ್ತಿರುವ ದಾವಣಗೆರೆ ಮೂಲದ ಅನಮಯ ಯೋಗೇಶ್ ದಿವಾಕರ್ ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ರೂ.ಗಳನ್ನು ಗೆದ್ದಿದ್ದಾರೆ. ಈ ಕುರಿತ ಎಪಿಸೋಡ್ 16ರ ಬುಧವಾರ ಪ್ರದರ್ಶನವಾಗಿದೆ.
ಲರ್ನಿಂಗ್ ಆಪ್ ಮೂಲಕ ಅ.5 ರಿಂದ 25ರವರೆಗೆ ನಡೆದ ಆನ್‌ಲೈನ್ ಕ್ವಿಜ್ ನಲ್ಲಿ ದೇಶಾದ್ಯಂತ ಭಾಗವಹಿಸಿದ್ದ 1.5 ಲಕ್ಷ ವಿದ್ಯಾ ರ್ಥಿಗಳಲ್ಲಿ ಅನಮಯ ಆಯ್ಕೆಯಾಗಿದ್ದರು.
ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಈ ಪ್ರತಿಭೆ, ದಾವಣಗೆರೆಯ ಚೌಕಿಪೇಟೆಯಲ್ಲಿರುವ ಜ್ಯೂವೆಲರಿ ಅಂಗಡಿ ಮಾಲಿಕ ದಿ. ಲಕ್ಷ್ಮಣ ಪುಟ್ಟಪ್ಪ ಕುರುಡೇಕರ್ ಹಾಗೂ ಶ್ರೀಮತಿ ಪಾರ್ವತಮ್ಮ ಲಕ್ಷ್ಮಣ ಕುರುಡೇಕರ್ ಅವರ ಮೊಮ್ಮಗಳ ಮಗ .
ದಿ. ಲಕ್ಷ್ಮಣ ಪುಟ್ಟಪ್ಪ ಕುರುಡೇಕರ್ ಮೊಮ್ಮಗಳಾದ ಅನುರಾಧ ದಿವಾಕರ್ ತನ್ನ ಪತಿಯೊಂದಿಗೆ ಸದ್ಯ ಉಡುಪಿಯಲ್ಲಿ ವಾಸಿಸುತ್ತಿದ್ದಾರೆ. ತನ್ನ ಮಗ ಕರೋಡ್ ಪತಿ ರಿಯಾಲಿಟಿ ಗೇಮ್ ಶೋ ನಲ್ಲಿ ಭಾಗವಹಿಸಿ 50 ಲಕ್ಷ ಗೆದ್ದಿರುವುದು ಖುಷಿ ತಂದಿದೆ ಎನ್ನುತ್ತಾರೆ ತಾಯಿ ಅನುರಾಧ.
ಅಮಿತಾಬ್ ಎದುರು ಹಾಟ್ ಸೀಟ್‌ನಲ್ಲಿ ಕುಳಿತುಕೊಳ್ಳುವುದು ಪ್ರತಿಯೊಬ್ಬರ ಕನಸು. ಅದನ್ನು ನನಸಾಗಿಸಿಕೊಳ್ಳಲು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಸತತ ತಾಲೀಮು ನಡೆಸಿದ್ದಾರೆ ಅನಮಯ.
ನಾನು ಆಯ್ಕೆಯಾಗಿದ್ದು ನವೆಂಬರ್ 27 ರಂದು ತಿಳಿಯಿತು. ಆಗಿನಂದಲೇ ತಯಾರಿ ಆರಂಭವಾಯಿತು. ತಂದೆ ಕ್ವಿಜ್ ಪುಸ್ತಗಳನ್ನು ಕೈಗಿತ್ತರು. ಸುಮಾರು ನಾಲ್ಕು ಸಾವಿರ ಪ್ರಶ್ನೋತ್ತರಗಳನ್ನು ಮನನ ಮಾಡಿಕೊಂಡಿದ್ದೆ. ತಾಯಿ ರಾಜ್ಯದ ಇತಿಹಾಸದ ಬಗ್ಗೆ ಹೇಳಿಕೊಟ್ಟರೆ, ಅಕ್ಕ ಗಣಿತ, ವಿಜ್ಞಾನಗಳ ಬಗ್ಗೆ ತಿಳಿಸಿಕೊಡುತ್ತಿದ್ದರು ಎನ್ನುತ್ತಾರೆ ಅನಮಯ.
ಅಕ್ಟೋಬರ್ 5ನೇ ತಾರೀಖನಿಂದ ಪ್ರತಿ ದಿನ 2 ಪ್ರಶ್ನೆ ಕೇಳಲಾಗುತ್ತಿತ್ತು. ಅದರಲ್ಲಿ ಆಯ್ಕೆಯಾಗಿದ್ದೆ. ನಂತರ ನಡೆದ ಮತ್ತೊಂದು ಕ್ವಿಜ್‌ನಲ್ಲಿ 8 ಜನರಲ್ಲಿ ಒಬ್ಬನಾದೆ. ಮುಂದಿನ ಹಾದಿ ಅಮಿತಾಬ್ ಅವರ ಮುಂದೆ ಕುಳಿತುಕೊಳ್ಳುವುದಾಗಿತ್ತು. ಆರಂಭದಲ್ಲಿ ಅವರೆದುರು ಮಾತನಾಡುವಾಗ ಹೃದಯ ಬಡಿತ ಹೆಚ್ಚಾಗಿತ್ತು ಎಂದರು ಅನಮಯ.
ಗೇಮ್ ಶೋ ನಲ್ಲಿ ಗೆದ್ದ ಹಣ ಏನು ಮಾಡುತ್ತೀಯ ಎಂಬ ಅಮಿತಾಬ್ ಪ್ರಶ್ನೆಗೆ, ಸ್ವಂತ ಕಾರ್ ಕಂಪನಿ ಆರಂಭಿಸುವ ಆಲೋಚನೆಯಿದೆ ಎಂಬ ಉತ್ತರಕ್ಕೆ ಸ್ವತಃ ಅಮಿತಾಬ್ ಆಶ್ಚರ್ಯ ವ್ಯಕ್ತಪಡಿಸಿದ್ದರು. ನನ್ನ ತಂದೆಗೂ ಕಾರ್ ಎಂದರೆ ಇಷ್ಟ. ನನಗೂ ಸಹ ಎಂದು ಹೇಳಿದ್ದ ಈ ಬಾಲಕ.
ಅಂದಹಾಗೆ ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರುವ ಈ ಬಾಲಕ. ಶಾಲೆಯ ಪ್ರಾಂಶುಪಾಲರು, ಶಿಕ್ಷಕಿಯರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ. ಗುರು-ಹಿರಿಯರಿಗೆ ಗೌರವ ಕೊಡುವ ರೀತಿ, ಶಾಲೆಗಳಲ್ಲಿ ನಡೆಯುವ ಕ್ವಿಜ್‌ಗಳಲ್ಲಿ ಭಾಗವಹಿಸುವ ಆಸಕ್ತಿಯನ್ನು ಪ್ರಶಂಸಿಸುತ್ತಾರೆ ಶಾಲೆಯ ಪ್ರಾಂಶುಪಾಲರು.
ಅನಮಯ, ನಗರದ ಸರ್ಕಾರಿ ಐಟಿಐ ಕಾಲೇಜಿನ ಉಪನ್ಯಾಸಕ ನಾಗರಾಜ್ ಅವರ ಸಹೋದರಿಯ ಮೊಮ್ಮಗ.