ಹರಪನಹಳ್ಳಿ, ಡಿ.14- ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಕರನ್ನು ಹೊಂದಿರುವ ಬಸ್‍ಗಳು ಪಟ್ಟಣದ ಸಾರಿಗೆ ನಿಲ್ದಾಣದಿಂದ ಸೋಮವಾರ ಪ್ರಯಾಣ ಆರಂಭಿಸಿದವು.
ಬೆಳಿಗ್ಗೆ ಸ್ಥಳೀಯ ಬಸ್ ಡಿಪೋಗೆ ಉಪವಿ ಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್, ಡಿವೈಎಸ್‍ಪಿ ವಿ.ಎಸ್. ಹಾಲಮೂರ್ತಿ, ಸಿಪಿಐ ಕೆ.ಕುಮಾರ್ ಭೇಟಿ ನೀಡಿ, ಘಟಕದ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸರ್ಕಾರದ ನಿರ್ದೇಶನದಂತೆ ನೌಕರರನ್ನು ಮನವೊಲಿಸಿ ಎಲ್ಲಾ ಮಾರ್ಗಗಳಲ್ಲಿ ಪೊಲೀಸರನ್ನು ನಿಯೋಜಿಸಿದರು. ಪ್ರಯಾಣಿಕರಿಗೆ ಆಗುವ ತೊಂದರೆಯನ್ನು ತಿಳಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿ ಬಸ್‍ನೊಂದಿಗೆ ಬೆಂಗಾವಲು ಪಡೆಯ ಪೊಲೀಸ್ ಸಿಬ್ಬಂದಿ ಭದ್ರತೆಯೊಂದಿಗೆ ಹರಪನಹಳ್ಳಿ ಗಡಿಯವರೆಗೂ ಬಸ್‍ಗಳನ್ನು ಬಿಟ್ಟು ಬರುತ್ತಿರುವ ದೃಶ್ಯ ಕಂಡುಬಂತು. ಕಳೆದ 3 ದಿನಗಳಿಂದ ತೊಂದರೆಗೀಡಾಗಿದ್ದ ಪ್ರಯಾಣಿಕರು ಕೊಂಚ ನಿರಾಳರಾದರು.
ಡಿಪೋ ವ್ಯವಸ್ಥಾಪಕ ವಿನಾಯಕ ಮಾತನಾಡಿ, ನಿಗದಿತ ಪ್ರಮಾಣದಲ್ಲಿ ಅಲ್ಲದಿದ್ದರೂ ಅನೇಕ ಬಸ್ಸುಗಳು ಓಡಾಟ ಆರಂಭಿಸಿವೆ ಎಂದು ಹೇಳಿದರು.ಹೊಸಪೇಟೆ, ರಾಯಚೂರು, ದಾವಣಗೆರೆ, ಹೂವಿನಹಡಗಲಿ, ಹರಿಹರ, ಕಂಚಿಕೇರಿ, ಕೊಟ್ಟೂರು ಕಡೆಗೆ ಹೋಗುವ ಬಸ್‍ಗಳು ಸಂಚಾರ ಪ್ರಾರಂಭಿಸಿದವು.
ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗುತ್ತಿ ದ್ದಂತೆ, ಖಾಸಗಿ ಬಸ್ ಬಿಟ್ಟು ಸಾರಿಗೆ ನಿಲ್ದಾಣಕ್ಕೆ ಪ್ರಯಾ ಣಿಕರು ದೌಡಾಯಿಸುತ್ತಿರುವುದು ಕಂಡು ಬಂತು.