ಜಾತಿ-ಆದಾಯ ಪತ್ರಕ್ಕಾಗಿ ಆಕಾಂಕ್ಷಿಗಳ ಹರಸಾಹಸ

ತಹಶೀಲ್ದಾರ್ ಕಚೇರಿಯಲ್ಲಿ ನೂಕುನುಗ್ಗಲು

ಹರಿಹರ, ಡಿ.14- ಇದೇ ದಿನಾಂಕ 27 ರಂದು ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳು ಅಗತ್ಯ ದಾಖಲಾತಿಗಳಿಗಾಗಿ ತಹಶೀಲ್ದಾರ್ ಕಚೇರಿಗೆ ಎಡತಾಕುತ್ತಿದ್ದಾರೆ.

ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ ಸ್ಪರ್ಧಾಕಾಂಕ್ಷಿಗಳು ಅಗತ್ಯ ದಾಖಲೆಗಳನ್ನು ಸಿದ್ದತೆ ಮಾಡಿಕೊಳ್ಳಲು ನಾ ಮುಂದೆ ತಾ ಮುಂದೆ ಎಂದು ಇಲಾಖೆಯ ಕಡೆಗೆ ಮುಖ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಲು ಜಾತಿ ಮತ್ತು ಆದಾಯ ಪತ್ರ ಅವಶ್ಯವಾಗಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ನೂಕು ನುಗ್ಗಲು ಉಂಟಾಗಿ ಪೊಲೀಸ್ ಸಿಬ್ಬಂದಿಗಳ ಸಹಕಾರ ಪಡೆಯುವ ಹಂತಕ್ಕೆ ಹೋಗಿ ನಿಂತಿತು. ತಹಶೀಲ್ದಾರ್‌ ಕಚೇರಿ ಮಾತ್ರ ಜಾತಿ ಆದಾಯ ಪತ್ರವನ್ನು ಪಡೆಯಲು ವ್ಯವಸ್ಥೆ ಮಾಡದಿದ್ದರಿಂದ ತೊಂದರೆ ಪಡುವಂತಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಸೂಚನೆ ನೀಡಿದರೂ ಸಹ ಯಾವುದೇ ವ್ಯಕ್ತಿಗಳು ಅದನ್ನು ಪಾಲಿಸುತ್ತಿಲ್ಲ.ಕೊರೊನಾ  ನಿಯಮಗಳಾದ ಮಾಸ್ಕ್, ಸಾಮಾಜಿಕ ಅಂತರವನ್ನು  ಸಹ ಯಾರೂ ಪಾಲನೆ ಮಾಡಲಿಲ್ಲ. ಕಚೇರಿ ಮುಂಭಾಗದಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದೆ ಜನರು ರಸ್ತೆಯ ಮಧ್ಯದಲ್ಲಿ ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದರ ಪರಿಣಾಮವಾಗಿ ಸಾರ್ವಜನಿಕರು ಓಡಾಡಲು ಹರ ಸಾಹಸ ಪಡುವಂತಾಗಿತ್ತು‌.ಸಂಚಾರಿ ಪೊಲೀಸರು ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳ ಫೋಟೋ ತೆಗೆದು ದಂಡ ವಸೂಲಿಗೆ ಮುಂದಾದ ದೃಶ್ಯವೂ ಕಂಡು ಬಂತು.

ಹರಳಹಳ್ಳಿ ಗ್ರಾಮದ ಚಂದ್ರಶೇಖರ್ ಮಾತನಾಡಿ, ಚುನಾವಣಾ ಆಯೋಗ ಚುನಾವಣೆ ನಡೆಸಲು ಕಡಿಮೆ ದಿನಗಳ ಅವಕಾಶ ನೀಡಿದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಅಗತ್ಯ ದಾಖಲೆಗಳನ್ನು ನೀಡುವುದಕ್ಕೆ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕು. ಅದನ್ನು ಬಿಟ್ಟು ಒಂದೇ ಸ್ಥಳದಲ್ಲಿ ಮಾತ್ರ ಪಡೆಯಲು ಅವಕಾಶ ಕಲ್ಪಿಸಿರುವುದರಿಂದ ತೊಂದರೆ ಆಗುತ್ತಿದೆ. ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಲೀ, ಕೂರಲು ಆಸನಗಳ ವ್ಯವಸ್ಥೆಯಾಗಲೀ ಇಲ್ಲ ಎಂದು ದೂರಿದರು.

ಸಿಬ್ಬಂದಿ ನರಸಮ್ಮ ಮಾತನಾಡಿ ಸಾರ್ವಜನಿಕರಿಗೆ ಬೇಕಾಗುವ ಜಾತಿ ಪ್ರಮಾಣ ಪತ್ರವನ್ನು ನೀಡುವುದಕ್ಕೆ ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ಪಡೆದುಕೊಂಡರೆ ಯಾವುದೇ ಸಮಸ್ಯೆ ಬರುವುದಿಲ್ಲ. ಆದರೆ ಒಮ್ಮೆಲೇ ಎಲ್ಲರೂ ಆಗಮಿಸಿ, ಬೇಕು ಎಂದು ಕೇಳಿದಾಗ ಕೊಡುವುದಕ್ಕೆ ಸ್ವಲ್ಪ ತೊಂದರೆ ಆಗುತ್ತದೆ. ತಾಳ್ಮೆಯಿಂದ ವರ್ತಿಸಿ, ಅಗತ್ಯ ದಾಖಲೆಗಳನ್ನು ಪಡೆಯಬೇಕು ಎಂದರು.

error: Content is protected !!