ದಾವಣಗೆರೆ, ಡಿ. 13- ಕಳೆದ 51 ವರ್ಷಗಳಿಂದಲೂ ಬಾಪೂಜಿ ಬ್ಯಾಂಕ್ `ಎ’ ಗ್ರೇಡ್ ನಲ್ಲಿಯೇ ಮುಂದುವರೆದಿದ್ದು, ಜಿಲ್ಲೆಯಲ್ಲಿಯೇ 1ನೇ ಸ್ಥಾನದಲ್ಲಿದೆ. ರಾಜ್ಯದ ಮುಂಚೂಣಿ 10 ಸಹಕಾರಿ ಬ್ಯಾಂಕುಗಳ ಪೈಕಿ ಒಂದೆಂಬ ಹೆಗ್ಗಳಿಕೆ ಸಾಧಿಸಿರುವುದಕ್ಕೆ ಸಹಕಾರಿ ಬಂಧುಗಳ ಸಹಕಾರ, ನಂಬಿಕೆ ಮತ್ತು ವಿಶ್ವಾಸ ಕಾರಣವಾಗಿದೆ ಎಂದು ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನುಡಿದರು.
ನಗರದ ಬಿಐಇಟಿ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕ್ರತಿಕ ಕೇಂದ್ರದಲ್ಲಿ ಇಂದು ವರ್ಚ್ಯುವಲ್ ಮುಖಾಂತರ ಜರುಗಿದ ಬಾಪೂಜಿ ಬ್ಯಾಂಕಿನ 51 ನೇ ವಾರ್ಷಿಕ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಸ್ಯರಿಗೆ ಈ ವರ್ಷವೂ ಶೇ.18 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದ್ದು, ರಿಜರ್ವ್ ಬ್ಯಾಂಕು ಲಾಭಾಂಶ ವಿತರಿಸದಂತೆ ಸೂಚಿಸಿದೆ. ಅದರ ಒಪ್ಪಿಗೆ ಬಂದ ಮೇಲೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ನಗರದ ಲಕ್ಷ್ಮಿಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ಬೆಂಗಳೂರಿನ ರಾಘವೇಂದ ಬ್ಯಾಂಕ್ ಅನೇಕ ಬ್ಯಾಂಕುಗಳಲ್ಲಿ ದುರ್ವ್ಯವಹಾರ ನಡೆದಿರುವುದರಿಂದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಮೇಲೆ ಕೇಸು ಹಾಕಲಾಗಿದೆ. ದಾರಿ ತಪ್ಪಿ ನಡೆದಾಗ ಏನಾಗುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ನಮ್ಮ ಬ್ಯಾಂಕಿನಲ್ಲಿ ಕೆಲಸ ಕೆೋಟ್ಟು, ಒಳ್ಳೆಯ ಸಂಬಳವನ್ನು ಕೊಟ್ಟಿದ್ದೇವೆ. ನಂಬಿಕೆಗೆ ದ್ರೋಹ ಮಾಡದಂತೆ ಎಲ್ಲರೂ ಕೆಲಸ ಮಾಡಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳುವುದಾಗಿ ನೌಕರರಿಗೆ ಕಠಿಣ ಎಚ್ಚರಿಕೆಯ ಚಾಟಿ ಬೀಸಿದರು.
ಸಹಕಾರಿ ಬ್ಯಾಂಕುಗಳಲ್ಲಿ ರಾಜಕೀಯ ವ್ಯಕ್ತಿಗಳು ಇರಬೇಕೇ, ಬೇಡವೇ ಎಂಬ ವಿಚಾರದಲ್ಲಿ; `ರಾಜಕೀಯದವರಿಗೆ ಒತ್ತಡಗಳಿರುತ್ತವೆ, ನಾಳೆ ಓಟು ಬೀಳ್ತವೋ, ಇಲ್ಲವೋ ಅಂತ ಸಾಲ ನೀಡುತ್ತಾರೆ. ಸಾಲ ತೆಗೆದುಕೊಂಡವನು ಲಾಸ್ ಆಗದಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಅಸಲು ಬಡ್ಡಿ ಏರುತ್ತಲೇ ಇರುತ್ತದೆ. ಹಾಗಾಗಿ ರಾಜಕೀಯ ವ್ಯಕ್ತಿಗಳು ಒಂದು ರೀತಿಯಲ್ಲಿ ಇದ್ದರೆ ಒಳ್ಳೆಯದು, ಇನ್ನೊಂದು ರೀತಿಯಲ್ಲಿ ಇಲ್ಲದಿದ್ದರೆ ಒಳ್ಳೆಯದು ಇವೆರಡನ್ನೂ ತುಲನೆ ಮಾಡಿ ನೋಡಿದರೆ, ಇಲ್ಲದಿದ್ದರೇ ಒಳ್ಳೆಯದು’.
– ಡಾ. ಶಾಮನೂರು ಶಿವಶಂಕರಪ್ಪ, ಅಧ್ಯಕ್ಷರು, ಬಾಪೂಜಿ ಬ್ಯಾಂಕ್
ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಅವರು ಬಾಪೂಜಿ ಕೋ-ಆಪರೇಟಿವ್ ಬ್ಯಾಂಕ್ನ 51ನೇ ವಾರ್ಷಿಕ ವರದಿ ಮಂಡಿಸಿದರು. 2019-20ನೇ ಸಾಲಿನಲ್ಲಿ ಒಟ್ಟಾರೆ 8.89 ಕೋಟಿ ರೂ. ಲಾಭ ಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರೆ ಬಾಬ್ತುಗಳಿಗೆ ಅವಕಾಶ ಕಲ್ಪಿಸಿದ ನಂತರ ರೂ.4.53 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಸಾಲಿನಲ್ಲಿ 12.66 ಕೋಟಿ ರೂ. ಷೇರು ಬಂಡವಾಳ, 680.71 ಕೋಟಿ ರೂ. ಠೇವಣಿಗಳು, 269 ಕೋಟಿ ರೂ. ಸಾಲ ಮತ್ತು ಮುಂಗಡ, ಸರ್ಕಾರಿ ಹೂಡಿಕೆಗಳಲ್ಲಿ 487 ಕೋಟಿ ರೂ. ತೊಡಗಿಸಿದ್ದು, ದುಡಿಯುವ ಬಂಡವಾಳ 802 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅಲ್ಲದೆ ಬ್ಯಾಂಕಿನ ಸ್ವಂತ ಬಂಡವಾಳವೇ ನೂರು ಕೋಟಿಗೇರಿದೆ ಎಂದರು.
ಹಿರಿಯ ನಿರ್ದೇಶಕ ಎ.ಎಸ್.ವೀರಣ್ಣ ಮಾತನಾಡಿ, ಕೊರೊನಾ ನಮ್ಮನ್ನು ಮೆತ್ತಗೆ ಮಾಡಿಬಿಟ್ಟಿದೆ, ಸಾಕಷ್ಟು ಹೊಸ ಪಾಠವನ್ನು ಕಲಿಸಿದೆ. ವರ್ಚ್ಯುವಲ್ ಮೀಟಿಂಗ್ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ, ಅದನ್ನು ಕಲಿಸಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿಯೂ ಬಾಪೂಜಿ ಬ್ಯಾಂಕ್ ಆರ್ಥಿಕವಾಗಿ ಚೇತರಿಕೆ ಕಂಡಿದೆ ಎಂದರು.
ಇಂಚರ ಆರ್.ಮೂರ್ತಿ ಪ್ರಾರ್ಥಿಸಿದರು. ನಿರ್ದೇಶಕರಾದ ಡಾ.ಪಿ.ಶಶಿಕಲಾ ಸ್ವಾಗತಿಸಿದರು. ಡಾ. ಎ.ಅರುಣ್ ಕುಮಾರ್ ವಂದಿಸಿದರು. ಪ್ರಧಾನ ವ್ಯವಸ್ಥಾಪಕ ಜಿ.ವಿ.ಶಿವಶಂಕರ್ ನಿರೂಪಣೆ ಮಾಡಿದರು.
ನಿರ್ದೇಶಕರುಗಳಾದ ಡಾ.ಬಿ.ಪೂರ್ಣಿಮಾ, ಡಾ.ಶಂಶಾದ್ ಬೇಗಂ, ಡಾ.ಕೆ.ಹನುಮಂತಪ್ಪ, ಡಾ.ಬಿ.ಎಸ್. ರೆಡ್ಡಿ, ಡಾ.ಹೆಚ್. ಶಿವಪ್ಪ, ಡಾ.ಸಿ.ವೈ. ಸುದರ್ಶನ್, ಡಾ.ಎಂ.ಎಂ.ಲಿಂಗರಾಜ, ಕೆ.ಬೊಮ್ಮಣ್ಣ, ಕೆ.ಎಸ್.ವೀರೇಶ್ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಸಲಹೆಗಾರರಾದ ಡಿ.ವಿ.ರವೀಂದ್ರ ಮತ್ತು ಎಸ್.ಕಲ್ಲಪ್ಪ, ಶಾಖಾ ವ್ಯವಸ್ಥಾಪಕರಾದ ಜಿ.ಓ.ಶಂಕರಪ್ಪ, ಬಿ.ಜಿ.ಬಸವರಾಜಪ್ಪ, ಎಂ.ಬಸವರಾಜ್, ಶ್ರೀಮತಿ ಶೋಭಾ ಪಾಟೀಲ್, ಕೆ.ಎಂ.ಲಿಂಗೇಶ್, ಡಿ.ಜಿ.ರವಿಶಂಕರ್, ಜಿ.ಬಿ.ಮಂಜುನಾಥ ಪಾಟೀಲ್, ಎಂ.ಎಸ್. ಪ್ರಸನ್ನ, ಪಿ.ಎಸ್. ರವೀಂದ್ರ ಹಾಗು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಈಚೆಗೆ ಸೇವಾ ನಿವೃತ್ತಿ ಹೆೋಂದಿದ ಜಿ.ವಿ.ರುದ್ರೇಶ್ ಮತ್ತು ಕೆ.ಎಂ.ಶಿವಾನಂದ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.