ಸಂಪುಟದ ಸಂಪಾದಕರಾಗಿ ಡಾ. ಎ.ಬಿ. ರಾಮಚಂದ್ರಪ್ಪ
ಮಲೇಬೆನ್ನೂರು, ಡಿ.13- ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಹೊರ ತರಲಿರುವ `ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ-3 ರ ಸಂಪಾದಕರನ್ನಾಗಿ ಹರಿಹರದ ಎಸ್.ಜೆ.ವಿ.ಪಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂಬಂಧ ಶನಿವಾರ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಕರೆದಿದ್ದ ಸಾಹಿತಿಗಳ, ಬರಹಗಾರರ ಮತ್ತು ಪತ್ರಕರ್ತರ, ಚಿಂತಕರ ಸಭೆಯಲ್ಲಿ ಸ್ಮರಣ ಸಂಪುಟ-3 ರ ಸಂಪಾದಕ ಮಂಡಳಿಯನ್ನು ರಚಿಸಲಾಯಿತು.
ಸಭೆಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಒಟ್ಟಾರೆ ಸಮಾಜಕ್ಕೆ ದಿಕ್ಸೂಚಿ ನೀಡುವಂತೆ ಮತ್ತು ನಾಡು-ನುಡಿಗಾಗಿ, ಸಮಾಜಕ್ಕಾಗಿ ಹೋರಾಟ ಮಾಡಿದವರ ಬಗ್ಗೆ ಈಗಿನ ಯುವ ಜನಾಂಗಕ್ಕೆ ತಿಳಿಸುವಂತಹ ವಿಷಯಗಳನ್ನು ಹೊತ್ತು
ಸ್ಮರಣ ಸಂಚಿಕೆ ಹೊರಬರಲಿ ಎಂದು ಶುಭ ಹಾರೈಸಿದರು.
ಜನಸಂಖ್ಯೆಗೆ ಅನುಗುಣವಾಗಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಸಂವಿಧಾನಬದ್ಧ ಹೋರಾಟಕ್ಕೆ ಶೀಘ್ರ ಪ್ರತಿಫಲ ಸಿಗುವ ವಿಶ್ವಾಸವಿದ್ದು, ಸರ್ಕಾರ ನಮ್ಮ ನಿರೀಕ್ಷೆಯಂತೆ ವಾಲ್ಮೀಕಿ ಜಾತ್ರೆ ಒಳಗಾಗಿ ಈಡೇರಿಸಬೇಕೆಂದು ಸ್ವಾಮೀಜಿ ಈ ಮೂಲಕ ಒತ್ತಾಯಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ್‌ನಾಯಕ, ಹಗರಿಬೊಮ್ಮನಹಳ್ಳಿಯ ಉಪನ್ಯಾಸಕ ಡಾ. ಎಂ.ಕೆ. ದುರುಗಪ್ಪ, ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಡಾ. ಹೆಚ್. ಗುಡ್ಡದೇಶ್ವರಪ್ಪ, ಚಿತ್ರದುರ್ಗದ ಇನ್ನೋರ್ವ ಉಪನ್ಯಾಸಕ ಡಾ. ಜೆ. ಕರಿಯಪ್ಪ ಮಾಳಗಿ, ಹೊಸಪೇಟೆಯ ನಿವೃತ್ತ ಪ್ರಾಚಾರ್ಯ ಡಾ. ಕೆ. ಪನ್ನಂಗಧರ, ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ಅಮರೇಶ್ ಯತಗಲ್, ಆರ್.ಕೆ. ಸುಬೇದಾರ್, ಪತ್ರಕರ್ತರಾದ ಭೀಮರಾಯ ಹದ್ದಿನಾಳ ಅವರುಗಳು ಮಾತನಾಡಿದರು.
`ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ-2 ರ ಸಂಪಾದಕರಾಗಿದ್ದ ಹರ್ತಿಕೋಟೆ ವೀರೇಂದ್ರಸಿಂಹ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸ್ಮರಣ ಸಂಪುಟ-3ರ ಸಂಪಾದಕರಾಗಿ ಆಯ್ಕೆಯಾದ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಬರುವ ಜನವರಿ 12ರ ಒಳಗಾಗಿ ಲೇಖನಗಳನ್ನು ಕಳುಹಿಸಿಕೊಡುವಂತೆ ಕೋರಿ ವಿಶೇಷವಾದ ಮತ್ತು ಗ್ರಂಥದ ರೂಪದಲ್ಲಿ ಈ ಸ್ಮರಣ ಸಂಚಿಕೆಯನ್ನು ತಯಾರಿಸಲು ಎಲ್ಲರೂ ಶ್ರಮಿಸೋಣ ಎಂದರು.
ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಹೊಳಲ್ಕೆರೆಯ ಕನ್ನಡ ಉಪನ್ಯಾಸಕ ಎನ್. ಕೆಂಚವೀರಪ್ಪ, ‘ಜನತಾವಾಣಿ’ ವರದಿಗಾರ ಜಿಗಳಿ ಪ್ರಕಾಶ್, ಮಾಲತೇಶ್ ಅಂಗವಾರ, ರಾಯಚೂರಿನ ಮಹಾನಂದಿ ನಾಯಕ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.