ಸಾರಿಗೆ ನೌಕರರ ಮುಷ್ಕರ : ಪ್ರಯಾಣಿಕರ ಪರದಾಟ

ಹರಪನಹಳ್ಳಿ, ಡಿ.11 – ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಮೊದಲ ದಿನದ ಮುಷ್ಕರ ಹರಪನಹಳ್ಳಿಯಲ್ಲಿ ಯಶಸ್ವಿಗೊಂಡಿತು.

ಇಲ್ಲಿನ ಡಿಪೋದಿಂದ ಬೆಳಗಿನಿಂದ ಯಾವೊಂದು ಬಸ್ಸು ಹೊರಗಡೆ ಬಂದಿರು ವುದಿಲ್ಲ. ಡಿಪೋದಲ್ಲಿ ಕೆಲಸ ಮಾಡುವ ಬಸ್ ಚಾಲಕರು, ನಿರ್ವಾಹಕರು ಡ್ಯೂಟಿಗೆ ಹೋಗದೆ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣಕ್ಕೆ ಆಗಮಿಸಿದ ಹೊಸಪೇಟೆ ವಿಭಾಗೀಯ ಸಾರಿಗೆ ನಿಯಂತ್ರಕ ಜಿ.ಶೀನಯ್ಯ ಅವರು ನೌಕರರ ಹುಡುಕಾಟ ಆರಂಭಿಸಿದರು.

ಕೊನೆಗೆ ಮಾಹಿತಿ ಹಿಡಿದು ಕೋಟೆ ಆಂಜನೇಯ ದೇವಸ್ಥಾನದ ಬಳಿ ಇರುವ ನೌಕರರ ಬಳಿ ತೆರಳಿ ಅವರ ಮನವೊಲಿಸಲು ಮುಂದಾದರು. ಆಗ ನೌಕರರು ಡಿಪೋಕ್ಕೆ ಹೋಗುವುದಾಗಿ ಹೇಳಿ ಸ್ಟೇಡಿಯಂಗೆ ತೆರಳಿ ಅಲ್ಲಿ ಸಭೆ ನಡೆಸಿದರು. 

ಆಗ ಪುನಃ ಅಲ್ಲಿ ಇರುವ ಮಾಹಿತಿ ಪಡೆದು ಸ್ಟೇಡಿಯಂ ಬಳಿ ತೆರಳಿದ ಸಾರಿಗೆ ಡಿಸಿ ನೌಕರರನ್ನು ಕೆಲಸಕ್ಕೆ ತೆರಳಿ ಎಂದು ವಿನಂತಿಸಿದರು. ಆಗ ಮತ್ತೆ ನೌಕರರು ತಪ್ಪಿಸಿಕೊಂಡು ಬೇರೆಡೆ ಹೋದರು.

ಹೀಗೆ ನೌಕರರನ್ನು ಹುಡುಕಿಕೊಂಡು ಬೆನ್ನತ್ತಿ ಹೋದ ಸಾರಿಗೆ ಡಿಸಿಯವರಿಗೆ ಕೊನೆಗೂ ನೌಕರರು ಸಿಗಲಿಲ್ಲ. ಇಲ್ಲಿನ ಡಿಪೋದಲ್ಲಿ 64 ಬಸ್ಸುಗಳಿದ್ದು, ಅದರಲ್ಲಿ ಕೇವಲ 3 ಬಸ್ಸುಗಳು ಮಾತ್ರ ನಿಗದಿತ ಮಾರ್ಗದ ಪ್ರಕಾರ ಪ್ರಯಾಣ ಬೆಳೆಸಿದವು.

ಕೊಟ್ಟೂರು ಹಾಗೂ ಹೂವಿನ ಹಡಗಲಿ ಕಡೆಗೆ ಮಾತ್ರ ಒಂದೆರಡು ಬಸ್ಸುಗಳು ಚಲಿಸಿದವು.  ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಬಹಳಷ್ಟು ಜನ ಪ್ರಯಾಣಿಕರು ಬೇರೆ ಬೇರೆ ಕಡೆ ತೆರಳಲು ಬಸ್‌ಗಾಗಿ ಕಾದು ಕಾದು ಸುಸ್ತಾ ದರು. ಮುಷ್ಕರ ನಡೆಸುತ್ತಿರುವ ನೌಕರರಿಗೆ ಇಲ್ಲಿ ಎಐಸಿಟಿಯು, ಸಿಪಿಐಎಂಎಲ್, ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ಬೆಂಬಲ ಸೂಚಿಸಿವೆ ಎಂದು ಆ ಸಂಘಟನೆಗಳ ಮುಖಂಡರಾದ ಇದ್ಲಿ ರಾಮಪ್ಪ ಹಾಗೂ ಗೌರಿಹಳ್ಳಿ ಹನುಮಂತಪ್ಪ ತಿಳಿಸಿದರು.

error: Content is protected !!