ಬೆಂಗಳೂರು, ಡಿ.9- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬರುವ ಫೆಬ್ರವರಿ 8 ಮತ್ತು 9 ರಂದು ಜರುಗಲಿರುವ 3ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮತ್ತು 2ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರಾಗಿದ್ದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು, ಸಂಸದರು, ಶಾಸಕರು ಒಗ್ಗಟ್ಟಿನ ಮಂತ್ರ ಪಠಿಸಿ, ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಹಾಕಿ, ವಾಲ್ಮೀಕಿ ಜಾತ್ರೆ ವೇಳೆಗೆ ಸಿಹಿ ಸುದ್ದಿ ನೀಡುವ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೇ, ವಾಲ್ಮೀಕಿ ಜಾತ್ರೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಸಂಸದರುಗಳಾದ ರಾಜಾ ಅಮರೇಶ ನಾಯಕ, ಅರಸೀಕೆರೆ ದೇವೇಂದ್ರಪ್ಪ, ಶಾಸಕರುಗಳಾದ ರಾಜಾವೆಂಕಟಪ್ಪ ನಾಯಕ, ಚಳ್ಳಕೆರೆ ರಘುಮೂರ್ತಿ, ಸಿರಗುಪ್ಪದ ಸೋಮಲಿಂಗಪ್ಪ, ಬಸವನಗೌಡ ದದ್ದಲ್, ನಾಗೇಂದ್ರ, ಕಂಪ್ಲಿ ಗಣೇಶ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಗಂಗಾಧರ್ ನಾಯಕ್, ಜಿ.ಟಿ. ಚಂದ್ರಶೇಖರಪ್ಪ, ಜೆಡಿಎಸ್ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್, ಶಾಂತಲಾ ರಾಜಣ್ಣ, ಎಂ.ಎನ್.ಎಸ್ ನಾರಾಯಣಸ್ವಾಮಿ, ಹರ್ತಿಕೋಟೆ ವೀರೇಂದ್ರಸಿಂಹ, ಸಿರಿಗೆರೆ ತಿಪ್ಪೇಶ್ ಮತ್ತಿತರರು ಉಪಸ್ಥಿತರಿದ್ದರು.