ರಾಣೇಬೆನ್ನೂರಿನ ಎಸ್ಟಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಶ್ರೀ ಕಾಗಿನೆಲೆ ನಿರಂಜನಾನಂದಪುರಿ ಸ್ವಾಮೀಜಿ
ರಾಣೇಬೆನ್ನೂರು, ಡಿ.8 – ಕಟ್ಟಕಡೆಯ ಕುರುಬನಿಗೂ ಸೌಲಭ್ಯ ದೊರಕಿಸಿಕೊಳ್ಳುವ ಹೋರಾಟ ನಮ್ಮದು. ಜನಸಂಖ್ಯೆಯ ಆಧಾರದ ಮೇಲಿನ ಮೀಸಲಾತಿ ಪಡೆಯುವ ಪ್ರಯತ್ನ ನಮ್ಮದು. ಬೇರೆಯವರ ಹಕ್ಕು ಕಿತ್ತುಕೊಳ್ಳುವುದಲ್ಲ. ಅಂತಹ ಜಾಯಮಾನ ಕುರುಬರದ್ದಲ್ಲ ಎಂದು ಕಾಗಿನೆಲೆ ಕನಕ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ರಾಣೇಬೆನ್ನೂರಿನ ಬೀರೇಶ್ವರ ಗುಡಿಯಲ್ಲಿ ನಡೆದ ಎಸ್ಟಿ ಹೋರಾಟದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಶ್ರೀಗಳು ಮಾತನಾಡುತ್ತಿದ್ದರು.
ನಮ್ಮ ಈ ಹೋರಾಟ ಇಂದಿನದಲ್ಲ. ದಶಕಗಳ ಹಿಂದಿನದ್ದು. ಅಂಬೇಡ್ಕರ್ ಅವರು ನಮಗೆ ಎಸ್ಟಿ ಸ್ಥಾನ ಕಲ್ಪಿಸಿದ್ದಾರೆ. ಅದರನ್ವಯ ನಾವು ಸೌಲಭ್ಯಗಳನ್ನು ಪಡೆಯುವ ಹೋರಾಟ ಇದಾಗಿದೆ. ಹಿಂದೆ ದೇವರಾಜ ಅರಸು ಹಾಗೂ ರಾಮಕೃಷ್ಣ ಹೆಗಡೆ ಅವರು ಈ ದಿಸೆಯಲ್ಲಿ ಕಳಿಸಿದ ಕಡತ ಕೇಂದ್ರದಿಂದ ಮರಳಿಬಂದಿವೆ. ಆಗ ನಮ್ಮದು ಗಟ್ಟಿ ಧ್ವನಿ ಇಲ್ಲದಾಗಿತ್ತು. ಈಗ ಅದಕ್ಕೆ ಯೋಗ್ಯ ಸಮಯ ಬಂದಿದೆ ಎಂದು ಸ್ವಾಮೀಜಿ ಹೇಳಿದರು.
ಶಿಕ್ಷಣ, ಕೃಷಿ, ನೌಕರಿಯಲ್ಲಿ ನಮಗೆ ಮೀಸಲಾತಿ ಬೇಕಿದೆ. ರಾಜಕೀಯದಲ್ಲಿ ಕೇವಲ ಗ್ರಾಮ ಮಟ್ಟದಲ್ಲಿ ಮಾತ್ರ ಅಲ್ಪ ಸ್ವಲ್ಪ ಮೀಸಲಾತಿ ಸಿಗುತ್ತಿದೆ. ಇದು ವಿಧಾನಸಭೆ, ಲೋಕಸಭೆ ತಲುಪುವ ಮಟ್ಟಕ್ಕೆ ಸಿಗಬೇಕಿದೆ. ಸ್ಥಳ ಕಾಯ್ದಿರಿಸಿ ನಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕ್ಕಾಗಿ ಕರೆಯುವಂತಾಗಬೇಕಿದೆ ಎನ್ನುವ ಹಂಬಲ ನಮ್ಮದು ಎಂದು ಸ್ವಾಮೀಜಿ ಹೇಳಿದರು.
ಕುರುಬರ ಕುಂಯಿ…
ಕುಂಯಿ (ಕುರಿ ಕೊಯ್ದರೆ) ಅಂದರೆ ನೀವೆಲ್ಲಾ ಸೇರ್ತೀರಿ. ಧರ್ಮ, ರಾಜಕೀಯ ಮುಂತಾದ ಅನಾಚಾರಗಳಿಗೆ ಕೂಡುವ ನೀವು, ಸಮುದಾಯದ ಏಳ್ಗೆಯ ಈ ಕಾರ್ಯದಲ್ಲಿ ಭಾಗವಹಿಸಿರಿ. ಅರ್ಧ ಕೆಜಿ ಅಡಿಕೆ, ಸಿವುಡು ಎಲೆಯೊಂದಿಗೆ ಕಾಟಾ ಚಾರಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳು ವದು ಬೇಡ. ನಿಮ್ಮ ಮಕ್ಕಳು, ಮೊಮ್ಮಕ್ಕಳ ಭವಿಷ್ಯದ ಬದಲಾವಣೆಗೆ ಈ ಪಾದಯಾತ್ರೆ ಯಶಸ್ಸು ಗಳಿಸಲು ಒಂದಾಗಿ ಶ್ರಮಿಸುವ. ಫೆಬ್ರವರಿ ತಿಂಗಳಿನ ನಮ್ಮ ಧ್ವನಿ ದಿಲ್ಲಿಗೆ ಕೇಳಿಸುವಂತಾಗಬೇಕು ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ಇಲ್ಲಿ ಯಾರೂ ಸ್ವಾರ್ಥಿಗಳಿಲ್ಲ, ಸಮುದಾಯದ ಏಳ್ಗೆಯ ಪ್ರಯತ್ನ ನಡೆದಿದೆ. ಶ್ರೀ ಗಳ ಪ್ರಯತ್ನಕ್ಕೆ ಸಮಾಜದ ಎಲ್ಲರೂ ಕೈಜೋಡಿಸಬೇಕು. ಅವರು ಹಿಡಿದ ಕೆಲಸ ಮುಗಿಯುವವರೆಗೂ ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಲಾರರು. ಈ ಹೋರಾಟ ಇತರರ ಹೋರಾಟಕ್ಕೆ ಮಾದರಿಯಂತಾಗಬೇಕು ಎಂದು ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಸ್ವಾಮೀಜಿ ಹೇಳಿದರು.
ಕೇಂದ್ರ ಸಮಿತಿಯ ಮಂಜಣ್ಣ ಮಾತನಾಡಿ, ಸೂರ್ಯ ದಿಕ್ಕು ಬದಲಿಸುವಂತೆ ಕುರುಬರ ಇಂದಿನ ಸ್ಥಿತಿ ಬದಲಾಗಲಿ ಎನ್ನುವ ಮಹದಾಸೆಯೊಂದಿಗೆ ಶ್ರೀಗಳು ಎಸ್ಟಿ ಹೋರಾಟದ ಪಾದಯಾತ್ರೆಯನ್ನು ಸಂಕ್ರಮಣ ದಿನದಿಂದ ಪ್ರಾರಂಭಿಸುವರು. ಕಾಗಿನೆಲೆಯಿಂದ ಬೆಂಗಳೂರುವರೆಗೂ ಒಂದೇ ರೀತಿಯ ವ್ಯವಸ್ಥಿತ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಶ್ರೀಗಳ ಪ್ರಯತ್ನ ಸಮಾಜದಲ್ಲಿ ಕುರುಹು ಉಳಿಸುವಂತಹದ್ದಾಗಿದೆ ಎಂದರು.
ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಸಮಾಜದ ಅಧ್ಯಕ್ಷ ಷಣ್ಮುಖಪ್ಪ, ಮೃತ್ಯುಂಜಯ ಗುದಿಗೇರ, ನಿಂಗಪ್ಪ ಗೌಡರ, ಚಂದ್ರಶೇಖರ ಕಂಬಳಿ, ಕುಬೇರಪ್ಪ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು. ಆನಂದ ಸ್ವಾಗತಿಸಿದರು.