ವರ್ಗಾವಣೆ ಮಾಡುವ ಮುನ್ನ ಸಂಬಂಧಿತ ಇಲಾಖೆಯವರು ಸೂಕ್ತ ನಿಯಮಾವಳಿ ಪಾಲನೆ ಮಾಡಬೇಕು. ಅದರ ಹೊರತಾಗಿ ವರ್ಗಾವಣೆ ಸಿಂಧು ಹೌದೋ, ಅಲ್ಲವೋ ಎಂಬುದು ಎರಡನೇ ಪ್ರಶ್ನೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ಒದಗಿಸಬೇಕು.
– ನಾಗರಾಜ್ ಮೆಹರಾಡೆ, ಕರವೇ ಜಿಲ್ಲಾ ಉಪಾಧ್ಯಕ್ಷರು
ಹರಿಹರ, ಡಿ.6- ನಗರಸಭೆಗೆ ನೂತನ ಪೌರಾಯುಕ್ತರು ಬಂದಿದ್ದು, ಅವರ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಕೀ ಸಿದ್ಧಗೊಳ್ಳದ್ದರಿಂದ ದಾಖಲೆಗಳನ್ನು ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.
ವರ್ಗಾವಣೆಯಾಗಿ ಹೊಸ ಪೌರಾಯುಕ್ತರು ಆಗಮಿಸಿದರೆ ಅವರ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಕೀ ಸೃಷ್ಟಿಸಲಾಗುತ್ತದೆ. ಹೊಸ ಪೌರಾಯುಕ್ತರು ಆಗಮಿಸಿ ಒಂದು ವಾರವಾದರೂ ಇನ್ನೂ ಆ ಕೀ ಸಿದ್ಧಗೊಳ್ಳಲಿಲ್ಲ. ಪರಿಣಾಮವಾಗಿ ಆಸ್ತಿಗಳ ಖಾತಾ ಎಕ್ಸ್‍ಟ್ರ್ಯಾಕ್ಟ್, ಟ್ರೇಡ್ ಲೈಸೆನ್ಸ್ ಸಾರ್ವಜನಿಕರಿಗೆ ಕನ್ನಡಿಯ ಗಂಟಾಗಿ ಪರಿಣಮಿಸಿದೆ.
ಯಾವುದಾದರು ಆಸ್ತಿ, ಪಾಸ್ತಿಗಳ ಮಾರಾಟ, ಖರೀದಿ, ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸೇರಿದಂತೆ ಹತ್ತಾರು ಕೆಲಸ ಕಾರ್ಯಗಳಿಗೆ ಮನೆ, ಕಟ್ಟಡ, ನಿವೇಶನಗಳ ಖಾತಾ ಎಕ್ಸ್‍ಟ್ರ್ಯಾಕ್ಟ್ ಅಗತ್ಯವಾಗುತ್ತದೆ. ಈ ಮುಂಚೆ ಕೈಯಿಂದ ಬರೆದುಕೊಡುವ ಪದ್ಧತಿಯಿದ್ದಾಗ ಕಂದಾಯ ಅಧಿಕಾರಿಯ ಸಹಿ ಸಾಕಾಗುತ್ತಿತ್ತು. ಆದರೀಗ ಕಂಪ್ಯೂಟರೀಕರಣವಾದ ನಂತರ ಪ್ರತಿ ಖಾತಾ ಎಕ್ಸ್‍ಟ್ರ್ಯಾಕ್ಟ್‍ಗೂ ಪೌರಾಯುಕ್ತರ ಡಿಜಿಟಲ್ ಸಹಿ ಬೇಕಾಗಿದೆ.
ಎರಡನೆಯದಾಗಿ ವಿವಿಧ ಉದ್ದಿಮೆ, ವ್ಯಾಪಾರ, ವಹಿವಾಟು ಮಾಡುವವರಿಗೆ ಟ್ರೇಡ್ ಲೈಸೆನ್ಸ್ ಅಗತ್ಯವಾಗುತ್ತದೆ. ಆ ಟ್ರೇಡ್ ಲೈಸೆನ್ಸ್ ಉದ್ದಿಮೆಗಳಿಗೆ ವಿದ್ಯುತ್ ಸಂಪರ್ಕ, ಜಿಎಸ್‍ಟಿ, ಸಿಎಸ್‍ಟಿ ಇತರೆ ತೆರಿಗೆ ಕೆಲಸ, ಕಾರ್ಯಗಳಿಗೆ ಅಗತ್ಯವಾಗಿದೆ.
ಸಾಮಾನ್ಯವಾಗಿ ಇಂತಹ ಒಬ್ಬ ಅಧಿಕಾರಿ ವರ್ಗಾವಣೆಯಾದಾಗ ಹೋಗುವ ಅಧಿಕಾರಿ ಬಂದಿರುವ ಅಧಿಕಾರಿಗೆ ಹೊಸ ಕೀ ಸೃಜಿಸಲು ಅಗತ್ಯ ಸಹಕಾರ ನೀಡುತ್ತಾರೆ. ಆದರೆ ಇಲ್ಲಿದ್ದ ಪೌರಾಯುಕ್ತರು ತಮ್ಮ ವರ್ಗಾವಣೆ ಅಸಿಂಧು ಎಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಇಲ್ಲಿಗೆ ಬಂದಿರುವ ಪೌರಾಯುಕ್ತರು ಆ ಹುದ್ದೆಗೇರಲು ಸಮರ್ಥರಲ್ಲ, ಹೀಗಾಗಿ ಇದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆನ್ನುವುದು ಹಾಗೂ ಹಿಂದಿನ ಪೌರಾಯುಕ್ತರ ವರ್ಗಾವಣೆ
ಪ್ರಿ ಮೆಚ್ಯೂರ್ ಎಂಬುದು ವಿವಾದದ ಕೇಂದ್ರ ಬಿಂದುವಾಗಿದೆ. ಒಟ್ಟಾರೆ ಈ ಪ್ರಕರಣವು ಗಂಡ, ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿ ತೆಂಬಂತೆ ಈ ಇಬ್ಬರು ಪೌರಾಯುಕ್ತರ ಜಗಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.