ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ನ್ಯಾಯಮೂರ್ತಿ ಸಾಬಪ್ಪ
ದಾವಣಗೆರೆ ಡಿ. 3 – ವಿಕಲಚೇತನರು ವಿಶಿಷ್ಟ ಶಕ್ತಿ, ಜ್ಞಾನ ಹಾಗೂ ಸಾಮರ್ಥ್ಯ ಹೊಂದಿರುತ್ತಾರೆ. ಸಾಧಿಸುವ ಛಲ, ಪರಿಶ್ರಮವಿದ್ದರೆ ವಿಕಲಚೇತನರೂ ಕೂಡ ಸಾಮಾನ್ಯರಂತೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ತಿಳಿಸಿದ್ದಾರೆ.
ನಗರದ ಅಂಧ ಹೆಣ್ಣು ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿ ಇಂದು ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕ್ರೀಡಾ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಿ.ಆರ್.ಸಿ.ಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾನಸಿಕವಾಗಿ ಸದೃಢರಾದರೆ ಸಾಧನೆಗೆ ಅಂಗವಿಕಲತೆ ಎಂದಿಗೂ ಅಡ್ಡಿಯಾಗುವುದಿಲ್ಲ. ಎಲ್ಲ ರಂಗಗಳಲ್ಲಿಯೂ ಸಮರ್ಥವಾಗಿ ಕಾರ್ಯನಿರ್ವಹಿಸುವ ಶಕ್ತಿ ವಿಕಲಚೇತನರಲ್ಲಿದೆ. ಸಾಧಿಸುವ ಛಲವಿರಬೇಕು. ಜೊತೆಗೆ ಪರಿಶ್ರಮಪಟ್ಟರೆ, ಸಾಮಾನ್ಯರಂತೆಯೇ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದವರು ತಿಳಿಸಿದ್ದಾರೆ.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ವಿಕಲಚೇತನರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕುಟುಂಬದ ಜೊತೆಗೆ ಸಮಾಜಕ್ಕೂ ಆಸ್ತಿಯಾಗಿ ಪರಿವರ್ತನೆ ಯಾಗಬೇಕು ಎಂದು ಕರೆ ನೀಡಿದರು.
ವಿಕಲಚೇತನರ ಸೌಲಭ್ಯಕ್ಕೆ ಯುಡಿಐಡಿ ಪಡೆಯಲು ಕರೆ
ಕೇಂದ್ರ ಸರ್ಕಾರದಿಂದ ದೇಶಾದ್ಯಂತ ವಿಕಲಚೇತನರಿಗೆ ಯು.ಡಿ.ಐ.ಡಿ. ಕಾರ್ಡ್ ವಿತರಿಸಲು ಉದ್ದೇಶಿಸಲಾಗಿದೆ. ಆದರೆ, ಜಿಲ್ಲೆಯ 22,933 ವಿಕಲಚೇತನರಲ್ಲಿ 9,323 ಜನರಿಗೆ ಮಾತ್ರ ಯು.ಡಿ.ಐ.ಡಿ. ಕಾರ್ಡ್ಗಳು ದೊರೆತಿವೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಿ.ಎಸ್. ಶಶಿಧರ್ ತಿಳಿಸಿದ್ದಾರೆ.
ಯುನಿಕ್ ಐ.ಡಿ. ಕಾರ್ಡ್ಗಳು ಮೂರ್ನಾಲ್ಕು ತಿಂಗಳಲ್ಲಿ ಸೌಲಭ್ಯಗಳಿಗೆ ಕಡ್ಡಾಯವಾಗಲಿವೆ. ಸರ್ಕಾರದ ಸೌಲಭ್ಯ ನಿರಂತರವಾಗಿ ಪಡೆಯಲು ಎಲ್ಲ ವಿಕಲಚೇತನರು ಯು.ಡಿ.ಐ.ಡಿ. ಕಾರ್ಡ್ಗಳನ್ನು ಪಡೆಯಬೇಕೆಂದು ಕರೆ ನೀಡಿದರು.
ಆನ್ಲೈನ್ನಲ್ಲೇ ಬಸ್ ಪಾಸ್ : ವಿಕಲಚೇತನರಿಗೆ ಕೆ.ಎಸ್.ಆರ್.ಟಿ.ಸಿ. ಮೂಲಕ ನೀಡಲಾಗುವ ವಾರ್ಷಿಕ 660 ರೂ.ಗಳ ರಿಯಾಯಿತಿ ದರದ ಬಸ್ ಪಾಸ್ಗಳ ನವೀಕರಣವನ್ನು ಆನ್ಲೈನ್ ಮೂಲಕವೇ ಮಾಡಬಹುದಾಗಿದೆ. ಹೊಸದಾಗಿ ಪಾಸ್ ಮಾಡಿಸುವವರು ನೇರವಾಗಿ ಕೆಎಸ್ಆರ್ಟಿಸಿಯಲ್ಲಿ ಮಾಡಿಸಬಹುದು ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಅಧಿಕಾರಿಗಳು ಪ್ರತಿಯೊಬ್ಬ ವಿಕಲಚೇತನನಿಗೂ ಸರ್ಕಾರದ ಸೌಲಭ್ಯಗಳು ತಲುಪುವ ರೀತಿ ಕಾರ್ಯ ನಿರ್ವಹಿಸಬೇಕು. ತಾಂತ್ರಿಕ ಕಾರಣಗಳಿಗಾಗಿ ಸೌಲಭ್ಯಗಳನ್ನು ನಿರಾಕರಿಸಿದೇ ಮಾನವೀಯತೆಯಿಂದ ನೆರವು ನೀಡಬೇಕು. ವಿಕಲಚೇತನರ ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವಾಗ ಸಿಗುವ ಸಂತೃಪ್ತಿ ಬೇರೆಲ್ಲೂ ಸಿಗದು ಎಂದು ಹೇಳಿದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಕೆ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಕ್ತ ವರ್ಷ 335 ವಿಕಲಚೇತನರಿಗೆ 14.50 ಲಕ್ಷ ರೂ. ವೆಚ್ಚದಲ್ಲಿ ಸಾಧನ ಸಲಕರಣೆ ಪೂರೈಕೆಗೆ ಟೆಂಡರ್ ಕರೆಯಲಾಗಿದೆ. ಪ್ರಸಕ್ತ ವರ್ಷ ವಿಕಲ ಚೇತನರಿಗೆ ದ್ವಿಚಕ್ರ ವಾಹನಕ್ಕಾಗಿ ಅರ್ಜಿ ಆಹ್ವಾ ನಿಸಿದ್ದು, ಅರ್ಜಿ ಸಲ್ಲಿಸಲು ಇದೇ ದಿನಾಂಕ 21 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು.
ಸ್ಫೂರ್ತಿ ಸಂಸ್ಥೆಯ ರೂಪ್ಲಾನಾಯ್ಕ ಮಾತನಾಡಿ, ಸಂಸದರು ಶಾಸಕರುಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯನ್ನು ಪುನರ್ವಸತಿಗಾಗಿ, ಶಿಕ್ಷಣಕ್ಕಾಗಿ ಸೌಲಭ್ಯ ಕಲ್ಪಿಸಲು ಅನುದಾನ ವಿನಿಯೋಗಿಸುವುದು ಸೂಕ್ತ ಎಂದರು.
ಇದೇ ಸಂದರ್ಭದಲ್ಲಿ ವಿಕಲಚೇತನ ವ್ಯಕ್ತಿಗಳನ್ನು ವಿವಾಹವಾದ ಸಾಮಾನ್ಯ ವ್ಯಕ್ತಿಗೆ ನೀಡಲಾಗುವ 50 ಸಾವಿರ ರೂ. ಪ್ರೋತ್ಸಾಹ ಧನದ ಠೇವಣಿ ಬಾಂಡ್‍ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್. ವಿಜಯಕುಮಾರ್, ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ವಿಕಲಚೇತನ ವೀರಯ್ಯ ಸ್ವಾಮಿ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂ.ಆರ್.ಡಬ್ಲ್ಯೂ. ಚನ್ನಪ್ಪ ಸ್ವಾಗತಿಸಿದರು. ದುರ್ಗೇಶ್ ಸಂಜ್ಞೆ ಭಾಷೆ ತರ್ಜುಮೆ ಮಾಡಿದರು.