ದಾವಣಗೆರೆ, ಡಿ. 3 – ಐದುನೂರು ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ವಿರುದ್ದ ಕನಕದಾಸರು ಧ್ವನಿ ಎತ್ತಿದ್ದಾರೆ. ಅವರೊಬ್ಬ ಮಹಾನ್ ದಾರ್ಶನಿಕರು. ದಾರ್ಶನಿಕರನ್ನು ಜಾತಿಯಿಂದ ನೋಡಬಾರದು ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಅಭಿಪ್ರಾಯಪಟ್ಟರು.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಏರ್ಪಡಿಸಿದ್ದ ಸಂತ ಕನಕದಾಸರ 533ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕದಾಸರು ಕುಲ ಕುಲವೇಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ? ಎನ್ನುವ ದಾಸ ಪದವನ್ನು ಹೇಳುತ್ತಾ ಜಾತಿ ವ್ಯವಸ್ಥೆ ವಿರುದ್ದ ಐದುನೂರು ವರ್ಷಗಳ ಹಿಂದೆಯೇ ದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಸಮಾಜದಲ್ಲಿದ್ದ ಮೇಲು, ಕೀಳು, ಜಾತಿ, ಮತ ಪಂಥದ ವಿರುದ್ದ ಪ್ರತಿಭಟನಾ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಕನಕದಾಸರು ಸಾರಿದ ತತ್ವಾದರ್ಶಗಳು ಇಂದಿಗೂ ಎಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶ ನಮ್ಮ ಎಲ್ಲರಿಗೂ ದಾರಿ ದೀಪವಾಗಬೇಕು ಎಂದರು.
ಕನಕದಾಸರು ವರ್ಣಾಶ್ರಮ ಸೃಷ್ಠಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿದ್ದರು. ಜಾತಿ ಪದ್ದತಿ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆ ಕೊಟ್ಟಿದ್ದರು. ಐದುನೂರು ವರ್ಷಗಳ ನಂತರವೂ ಸಹ ಜಾತಿ ವ್ಯವಸ್ಥೆ ಹೆಚ್ಚಾಗಿರುವುದು ಆತಂಕಕ್ಕೆ ಈಡುಮಾಡಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಯೊಂದು ರಂಗದಲ್ಲೂ ಜಾತೀಯತೆ ತುಂಬಿ ತುಳುಕುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ದೇಶದ ಪ್ರಗತಿಗೆ ಮಾರಕ ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ.ಎಂ.ಮಂಜುನಾಥ, ಕೆ.ಜಿ.ರಹಮತ್‍ವುಲ್ಲಾ, ಬಿ.ಎಚ್.ಉದಯಕುಮಾರ್, ಎಂ.ಕೆ. ಲಿಯಾಖತ್ ಆಲಿ, ಡಿ.ಶಿವಕುಮಾರ್, ಅಲ್ಲಾವಲಿ ಸಮೀರಖಾನ್, ಎ.ರಾಜಶೇಖರ್, ಬಾಷಾ, ಜೆ.ವಿ.ವೆಂಕಟೇಶ್, ಬಿ.ಚಂದ್ರಪ್ಪ. ಟಿ.ಸುರೇಶ್, ರಂಗನಾಥ್, ಆಶ್ರಫ್ ಆಲಿ ಮತ್ತಿತರರು ಉಪಸ್ಥಿತರಿದ್ದರು.