ಗೌರವ ಧನ ಹೆಚ್ಚಳಕ್ಕೆ ಜಿಲ್ಲಾ ವಿಶೇಷ ಶಿಕ್ಷಕರ ಪ್ರತಿಭಟನೆ

ದಾವಣಗೆರೆ, ಡಿ.2- ರಾಜ್ಯದ ವಿಶೇಷ ಶಾಲಾ ಶಿಕ್ಷಕರ ಗೌರವ ಧನವನ್ನು ಹೆಚ್ಚಿಸು ವಂತೆ ಆಗ್ರಹಿಸಿ ಜಿಲ್ಲಾ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ಸದಸ್ಯರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮುಖೇನ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು, ದೀಪ ಬೆಳಗಿಸಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

2010–11ನೇ ಸಾಲಿನಲ್ಲಿ ಸರ್ಕಾರವು ಶಿಶು ಕೇಂದ್ರಿತ ಸಹಾಯ ಧನ ಯೋಜನೆ ಎನ್ನುವ ಅನುದಾನ ನೀತಿ ಜಾರಿಗೊಳಿಸಿತು. ವಿಶೇಷ ಶಿಕ್ಷಕರಿಗೆ 6,500 ಮತ್ತು ಇತರೆ ಸಿಬ್ಬಂದಿಗೆ 4 ಸಾವಿರದಿಂದ 5 ಸಾವಿರ ಗೌರವ ಧನ ನೀಡಲಾಗುತ್ತಿತ್ತು. 2013–14ರಲ್ಲಿ ವಿಶೇಷ ಶಿಕ್ಷಕರ ಗೌರವ ಧನವನ್ನು 13,500ಕ್ಕೆ ಹೆಚ್ಚಿಸಲಾಯಿತು. ಇತರೆ ಸಿಬ್ಬಂದಿಗೆ 8 ಸಾವಿರದಿಂದ 9 ಸಾವಿರಕ್ಕೆ ಗೌರವ ಧನ ಹೆಚ್ಚಿಸಲಾಯಿತು. ಆದರೆ 2014ರಿಂದ ಇಲ್ಲಿಯವರೆಗೂ ವಿಶೇಷ ಶಿಕ್ಷಕರಿಗೆ ಮತ್ತು ಇತರೆ ಸಿಬ್ಬಂದಿಗೆ ನೀಡುತ್ತಿರುವ ಗೌರವ ಧನವನ್ನು ಹೆಚ್ಚಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಅಂಗವಿಕಲರು ಮತ್ತು ಹಿರಿಯ ನಾಗರಿ ಕರ ಕಲ್ಯಾಣ ಇಲಾಖೆಯ ಶಿಶು ಕೇಂದ್ರಿತ ಸಹಾಯಧನ ಯೋಜನೆಯಡಿ ರಾಜ್ಯದಲ್ಲಿ 141 ವಿಶೇಷ ಶಾಲೆಗಳು ಅನುದಾನ ಪಡೆಯುತ್ತಿವೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನ ಸಹ ಸಿಗದೇ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಬದುಕು ದುಸ್ತರವಾಗಿದೆ ಎಂದು ಅಳಲಿಟ್ಟರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಒ. ಚಿಕ್ಕಪ್ಪ, ಜಿಲ್ಲಾ ಕಾರ್ಯದರ್ಶಿ ಆರ್. ಗಣೇಶ್, ಖಜಾಂಚಿ ಯಶೋಧಮ್ಮ ಭಾಗವಹಿಸಿದ್ದರು.

error: Content is protected !!