ಮಠ-ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿರುವುದು ಸ್ತುತ್ಯಾರ್ಹ

ಸಿಎಂಗೆ ಫೇಸ್ ವ್ಯಾಲ್ಯೂ ಇದೆ

ಮುಖ್ಯಮಂತ್ರಿಗಳಿಗೆ ಸ್ಟಾರ್ ವ್ಯಾಲ್ಯು ಇದೆ. ಫೇಸ್ ವ್ಯಾಲ್ಯೂ ಇದೆ. ಯುವಕರಲ್ಲಿ ವೃದ್ಧರನ್ನು ನೋಡಬಹುದು. ಆದರೆ, ವೃದ್ಧರಲ್ಲಿ ಯುವಕರೆಂದರೆ ಬಿ.ಎಸ್.ಯಡಿಯೂರಪ್ಪನವರು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧರಾದವರು. ಬರದ ನಾಡಿಗೆ ಖ್ಯಾತಿಯಾಗಿರುವ ಚಿತ್ರದುರ್ಗ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿಸುವುದು ಸೂಕ್ತ. ಲಿಂಗಾಯತ ವೀರಶೈವ ಜನಾಂಗಕ್ಕೆ ಓಬಿಸಿ ಮೀಸಲಾತಿ ಕೊಡಬೇಕೆನ್ನುವ ಮುಖ್ಯಮಂತ್ರಿಗಳ ನಿರ್ಧಾರದಿಂದ ದೊಡ್ಡ ಸಂತೋಷವಾಗಿದೆ.

-ಡಾ. ಶಿವಮೂರ್ತಿ ಮುರುಘಾ ಶರಣರು

ಚಿತ್ರದುರ್ಗ, ನ.29- ರಾಜ್ಯದ ನೆಲ, ಜಲ, ಹವಾಮಾನ, ಸಂಪತ್ತು ಆದಿಯಾಗಿ ಅದೆಷ್ಟು ಶ್ರೀಮಂತವಾ ಗಿದೆಯೋ ಅಷ್ಟೇ ಶ್ರೀಮಂತಿಕೆ ಅಧ್ಯಾತ್ಮ, ಧರ್ಮ, ಸಂಸ್ಕೃತಿಗಳಲ್ಲೂ ಇದೆ. ಇಲ್ಲಿನ ಮಠ-ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿರುವುದು ಸ್ತುತ್ಯಾರ್ಹ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ನಗರದ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ಇಂದು ಆಯೋಜಿಸಲಾಗಿದ್ದ ಮುರುಘಾಶ್ರೀ ಪ್ರಾಚ್ಯವಸ್ತು ಸಂಗ್ರಹಾಲಯದ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ವಸ್ತು ಸಂಗ್ರಹಾಲಯವನ್ನು ಲೋಕಾರ್ಪ ಣೆಗೊಳಿಸಿ ಅವರು ಮಾತನಾಡಿದರು. 

ಚಿತ್ರದುರ್ಗ ಇಂದು ಎಲ್ಲರ ಗಮನ ಸೆಳೆದಿರುವುದು ಪೂಜ್ಯ
ಡಾ. ಶಿವಮೂರ್ತಿ ಮುರುಘಾ ಶರಣರ ಸೇವೆಯಿಂದಾಗಿ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಈ ಸಮಾಜವನ್ನು ಮುನ್ನಡೆಸುತ್ತಿರುವ, ಸಮಾಜದ ಎಲ್ಲಾ ವರ್ಗದವರನ್ನು ಅದರಲ್ಲಿಯೂ ಶೋಷಿತರ, ದೀನ-ದಲಿತರ ಪಾಲಿಗೆ ನಿಜವಾಗಿಯೂ ಬೆಳಕಾಗಿರುವ ಶ್ರೀಗಳು, ಮಠವನ್ನು ಒಂದು ವರ್ಗದ ಮಠವನ್ನಾಗಿಸದೇ, ಸಮಾಜದ ಎಲ್ಲಾ ವರ್ಗದವರ, ಜಾತ್ಯತೀತ ಮಠವನ್ನಾಗಿ ಪರಿವರ್ತಿಸಿದ್ದಾರೆ. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಂಡಿದೆ. ಮಾನವ ಸಂಗ್ರಹದ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಯಾವುದೇ ಲೋಹವನ್ನು ಬ್ಯಾಂಕಿನಲ್ಲಿ ಇಟ್ಟರೆ ನಿಧಿ ಎನಿಸುತ್ತದೆ ಅಥವಾ ಮೈಮೇಲೆ ಧರಿಸಿಕೊಂಡರೆ ಆಭರಣ ಅನಿಸಿಕೊಳ್ಳುತ್ತದೆ. ಆದರೆ, ಅದನ್ನು ಮ್ಯೂಸಿಯಂನಲ್ಲಿ ಇಟ್ಟರೆ ಆಕರ್ಷಣೀಯ ವಸ್ತು ಎನಿಸಿಕೊಳ್ಳುತ್ತದೆ. ಹಾಗಾಗಿ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರಾಚ್ಯವಸ್ತು ಸಂಗ್ರಹಿಸುವ ಹವ್ಯಾಸ ಇದೆ. ಅನುಭಾವ ಸಂಗ್ರಹ ಇದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪ ಕಟ್ಟಿ ಅನುಭಾವಕ್ಕಾಗಿ ಹಾತೊರೆದರು. ಅಲ್ಲಿದ್ದ 770 ಅಮರಗಣಂಗಳು ಅನುಭಾವಕ್ಕಾಗಿ ಹಂಬಲಿಸಿದರು. ಅದೇ ರೀತಿ ಲೋಕ ಸಂಗ್ರಹ ಅಂದರೆ ಜನಸಂಗ್ರಹ. ಎಲ್ಲಾ ದಾರ್ಶನಿಕರು ಲೋಕ ಸಂಗ್ರಹ ಕಾರ್ಯಕ್ಕೆ ಮುಂದಾದರು. ಬಸವಣ್ಣನವರು ಲೋಕ ಸಂಗ್ರಹ ಮಾಡಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ನುಡಿದರು. 

ವೇದಿಕೆಯಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮೀಜಿ, ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್‍ಬಾಬು, ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಶ್ರೀಮತಿ ಜಿ.ರಾಧಿಕಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್ ಮತ್ತು ವೀರಶೈವ ಸಮಾಜದ ಅಧ್ಯಕ್ಷ ಎನ್. ಜಯಣ್ಣ ಇದ್ದರು.

ಇದೇ ಸಂದರ್ಭದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್‍ನ ಅಧ್ಯಕ್ಷ ಎಸ್.ಲಿಂಗಮೂರ್ತಿ, ಮುರುಘಾಶ್ರೀ ಮ್ಯೂಸಿಯಂನ ಕ್ಯುರೇಟರ್ ಶಂಕರ ಎಸ್.ಅಥಣಿ ಮತ್ತು ಕಲಾ ಸಂರಕ್ಷಣಾಕಾರ ಶರಣಪ್ಪ ಎಂ.ಬಾರಂಗಿ ಅವರುಗಳನ್ನು ಸನ್ಮಾನಿಸಲಾಯಿತು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಹರ್ತಿಕೋಟೆ ವೀರೇಂದ್ರಸಿಂಹ ಸ್ವಾಗತಿಸಿದರು. ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ವಂದಿಸಿದರು. ಶ್ರೀಮತಿ ನೇತ್ರಾವತಿ  ಕಾರ್ಯಕ್ರಮ ನಿರೂಪಿಸಿದರು.

error: Content is protected !!