ವಿಶ್ವವಿದ್ಯಾನಿಲಯಗಳು ಜ್ಞಾನ ಸಂಪನ್ನ ಕೇಂದ್ರಗಳು : ಡಾ|| ಈಶ್ವರಪ್ಪ ವಿಶ್ಲೇಷಣೆ

ದಾವಣಗೆರೆ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ಡಾ|| ಚಿಮೂ ಅವರ ಹೆಸರಿಡುವ ಕಾರ್ಯಕ್ರಮ

ದಾವಣಗೆರೆ,ನ.27- ‘ವಿಶ್ವವಿದ್ಯಾಲಯಗಳು ಜ್ಞಾನ ಸಂಪನ್ನ ಕೇಂದ್ರಗಳಾಗಿದ್ದು, ಇಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ನಡೆದಾಡುವ ವಿಶ್ವಕೋಶಗಳಾಗಿದ್ದಾರೆ ಎಂದು ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ಸಲಹೆಗಾರರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಎಂ.ಜಿ. ಈಶ್ವರಪ್ಪ ಬಣ್ಣಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇಂದು ನಡೆದ 65ನೇ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಅಧ್ಯಯನ ವಿಭಾಗಕ್ಕೆ ಡಾ.ಎಂ.ಚಿದಾನಂದ ಮೂರ್ತಿಯವರ ಹೆಸರಿಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಉಪನ್ಯಾಸಕರಾಗಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ
ಕನ್ನಡ ಪ್ರಾಧ್ಯಾಪಕ ಡಾ.ಜೆ.ಎಂ ನಾಗಯ್ಯ
ಅವರು ಮಾತನಾಡಿ, ಡಾ. ಎಂ.ಚಿದಾನಂದ ಮೂರ್ತಿ ಅವರು ಕನ್ನಡ ಸಾಹಿತ್ಯ, ಶಾಸನ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. 

ಚಿ.ಮೂ ಅವರು ವಿಜ್ಞಾನದ ಮೂಲ ವಿದ್ಯಾರ್ಥಿಯಾಗಿದ್ದರೂ ತೀ.ನಂಶ್ರೀ, ಕುವೆಂಪು, ಜಿ.ಎಸ್ ಶಿವರುದ್ರಪ್ಪನವರಿಂದ ಪ್ರಭಾವಕ್ಕೊಳಗಾಗಿ ಕನ್ನಡ ಸಾಹಿತ್ಯದ ಕಡೆಗೆ ಒಲವು ತೋರಿದರು. 

ಇವರು ಕನ್ನಡ ನಾಡು, ನುಡಿಯ ಹೋರಾಟಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ‘ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬ ನಾಣ್ಣುಡಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅವರು ಮಾತನಾಡಿ, ‘ನಾವೆಲ್ಲರೂ ಕನ್ನಡ ನಾಡು ನುಡಿಗೆ ಸೇವೆಗೆ ಕಂಕಣಬದ್ದರಾಗಬೇಕು. ಪ್ರಾಧ್ಯಾಪಕರಿಗೆ ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಪ್ರಕಟಣೆಗಳು ಜೀವನದ ಧ್ಯೇಯವಾಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 2020ರ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಜಿ ಈಶ್ವರಪ್ಪ,  ಆರ್. ತಿಪ್ಪೇಸ್ವಾಮಿ,  ಎಚ್. ಷಡಾಕ್ಷರಪ್ಪ ಅವರನ್ನು ಸನ್ಮಾನಿಸಲಾಯಿತು. 

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ ಸ್ವಾಗತಿಸಿದರು. ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಕೆ. ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನ ಕಾರ್ಯಕ್ರಮವನ್ನು ಸ್ನಾತಕೋತ್ತರ ಕೇಂದ್ರ ಚಿತ್ರದುರ್ಗ ಸಂಯೋಜನಾಧಿಕಾರಿ ಡಾ.ಹೆಚ್.ವಿಶ್ವನಾಥ ನಡೆಸಿಕೊಟ್ಟರು. 

ಡಾ.ಭೀಮಾಶಂಕರ ಜೋಷಿ ನಿರೂಪಿಸಿದರು. ಡಾ.ಮಹಾಂತೇಶ ಪಾಟೀಲ ವಂದಿಸಿದರು. ಡಾ.ಬಸವರಾಜ ಬಿ. ಪರಿಚಯಿಸಿದರು. 

ಪ್ರೊ.ಗೋಪಾಲ ಎಂ. ಅಡವಿರಾವ್ ಡಾ.ಜೆ.ಕೆ ರಾಜು, ಡಾ.ಗಾಯತ್ರಿ ದೇವರಾಜ್, ಡಾ.ವೆಂಕಟೇಶ, ಡಾ.ಎನ್.ಎಸ್ ಗುಂಡೂರ, ಡಾ.ಶಿವಕುಮಾರ ಕಣಸೋಗಿ, ಡಾ.ಜೋಗಿನಕಟ್ಟೆ ಮಂಜುನಾಥ, ಡಾ.ಜಯರಾಮಯ್ಯ, ಡಾ.ವಿಜಯಕುಮಾರ, ರೂಪೇಶ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!