ದಾವಣಗೆರೆ, ನ.20- ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಬರುವ ಡಿಸೆಂಬರ್ 7ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಗರದ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆದ ರಾಜ್ಯ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತ ನಾಡಿ, ಕೇಂದ್ರ ಸರ್ಕಾರವು ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ಇವುಗಳ ತಿದ್ದುಪಡಿ ಕಾನೂನು ರೂಪಿಸಿದ್ದು, ರಾಷ್ಟ್ರಪತಿ ಅವರ ಸಹಿ ಆಗಿದೆ. ರಾಜ್ಯ ಸರ್ಕಾರ ಕಾನೂನು ಜಾರಿಗೆ ಹೊರಟಿದೆ. ಈ ತಿದ್ದುಪಡಿ ಕಾಯ್ದೆಗಳಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳುವ ಯಾವ ಗಂಡು ಮಕ್ಕಳೂ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯಲ್ಲಿ ಇದು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ತಿದ್ದುಪಡಿ ಕಾಯ್ದೆಗಳ ವಿರೋಧಿಸುವ ಜೊತೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಹ ರೈತ ಉತ್ಪನ್ನಗಳ ಖರೀದಿ ಕೇಂದ್ರ ತೆರೆಯಬೇಕು. ಅದು ಸರ್ಕಾರಿ ರಜಾ ದಿನಗಳನ್ನು ಹೊರೆತುಪಡಿಸಿ ವರ್ಷದ ಉಳಿದ ದಿನಗಳಲ್ಲಿ ತೆರೆದಿರಬೇಕು. ಮಳೆಯಿಂದಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು, ಆವರ್ತ ನಿಧಿ ಸ್ಥಾಪಿಸಿ ರಾಗಿ, ಜೋಳ, ಭತ್ತ ಸೇರಿದಂತೆ ಇನ್ನಿತರೆ ರೈತರ ಉತ್ಪನ್ನಗಳ ಖರೀದಿಸಿ ಅದನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಬೇಕು. ಇದಕ್ಕಾಗಿ 10ರಿಂದ 15 ಸಾವಿರ ಕೋಟಿ ರೂ. ಬೇಕಿದ್ದು, 5 ಸಾವಿರ ಕೋಟಿಯನ್ನಾದರೂ ಸದ್ಯಕ್ಕೆ ಮೀಸಲಿಡಬೇಕಿದೆ. ಆರ್ಥಿಕ ನೀತಿ ರೂಪಿಸದೇ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಾಯ್ದೆ ತಿದ್ದುಪಡಿ ತರುವುದು ಸರಿಯಲ್ಲ. ಈ ಎಲ್ಲಾ ವಿಚಾರವಾಗಿ ಸರ್ಕಾರದ ಕಣ್ಣು ತೆರೆಸಲು ಬಹುಮುಖ್ಯವಾಗಿ ಬೆಂಗಳೂರಿನಲ್ಲಿ ನಡೆಯುವ ವಿಧಾನಸಭೆ ಅಧಿವೇಶನ ಪ್ರಾರಂಭ ದಿನ ಡಿಸೆಂಬರ್ 7ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರಕ್ಕೆ ಚುರುಕು ಮುಟ್ಟಿಸುವುದು ನಮ್ಮ ಪ್ರಮುಖ ಹೋರಾಟವೆಂದರು.
ಕೋಡಿಹಳ್ಳಿ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ನಿರ್ಧಾರ
ಆಡಳಿತ ಚುಕ್ಕಾಣಿ ಹಿಡಿಯುವ ಯಾವುದೇ ರಾಷ್ಟ್ರೀಯ ಪಕ್ಷಗಳು ರೈತರ ಉಳಿಸುವಲ್ಲಿ ಗಟ್ಟಿ ನಿರ್ಧಾರಕ್ಕೆ ಬರುತ್ತಿಲ್ಲ. ಕೆಲ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳು ಸ್ಪಂದಿಸುತ್ತಿವೆ. ಪ್ರಸ್ತುತ ಸರ್ಕಾರ ರೈತರ ಪರವಾಗಿಲ್ಲ. ಕಂಪನಿಗಳ ಸರ್ಕಾರಗಳಾಗಿವೆ. ಕೃಷಿ ಕ್ಷೇತ್ರ ಮತ್ತು ಹಕ್ಕನ್ನು ಉಳಿಸಿಕೊಳ್ಳಲು ಎಂತಹ ತ್ಯಾಗಕ್ಕೂ ಸಿದ್ದರಿರಬೇಕು. ನಮ್ಮ ಚಳುವಳಿಗೆ ತರ್ಕಗಳಲ್ಲೇ ಮುಳುಗುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಣ್ಣ ರೈತರೂ ಸಹ ತಮ್ಮ ಭೂಮಿ ಉಳಿಸಿಕೊಳ್ಳಲು ಆಗಲ್ಲ. ಜನರು ಬೀದಿಗೆ ಬೀಳುವ ಸ್ಥಿತಿ ಇದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ರಾಜಕೀಯ ಪಕ್ಷಗಳ ಭಾಗ ಮಾಡಿ ಅವುಗಳ ಬೆಂಬಲಿಸುವ ರೈತರು ಮಾತ್ರ ಉಳಿಯುತ್ತಾರೆ. ಆದರೆ, ಸರ್ಕಾರದ ನೀತಿಗಳು ಇವರಿಗೂ ಮುಳುವಾಗಲಿದೆ. ಅದನ್ನು ಅರಿಯಬೇಕು.
– ಕೋಡಿಹಳ್ಳಿ ಚಂದ್ರಶೇಖರ್
ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಸಲಾಗುತ್ತಿತ್ತು. ಆದರೆ, ರೈತರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂಬ ಭಯದಲ್ಲಿ ಸರ್ಕಾರ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ. ಆದರೂ ಸಹ ನಾವುಗಳು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿದ್ಧರಾಗಬೇಕಿದೆ. ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಇದೇ ದಿನಾಂಕ 27ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯರು ಭಾಗವಹಿಸೋಣ. ಏಕೆಂದರೆ ದೆಹಲಿಯಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ. ಎಲ್ಲರೂ ಅಲ್ಲಿ ಹೋಗಿ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣ ಇದೇ ದಿನಾಂಕ 26ರಂದು ಗ್ರಾಮೀಣ ಭಾರತ ಬಂದ್ ಮಾಡುವ ಹೋರಾಟ ಮಾಡೋಣ ಎಂದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಹೆಚ್.ಕೆ. ಬಸವರಾಜಪ್ಪ, ಮಂಜುನಾಥ್ಗೌಡ್ರು, ರಾಜ್ಯ ಉಪಾ ಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿ ಹಳ್ಳಿ ಚನ್ನಬಸಪ್ಪ ಸಿದ್ಧವೀರಪ್ಪ ಈಚಗಟ್ಟ, ಚಿನ್ನಸಮುದ್ರ ಶೇಖರ ನಾಯ್ಕ ಸೇರಿದಂತೆ ಇತರರು ಇದ್ದರು.