ಹರಿಹರ ನಗರಸಭೆಗೆ ಗುತ್ತೂರು ಸೇರ್ಪಡೆ ಮಾಡದಿರಲು ಒತ್ತಾಯ

ಹರಿಹರ, ನ.20- ರಾಜ್ಯ ಸರ್ಕಾರವು ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ನಗರದ ಹೊರವಲಯದ ಗುತ್ತೂರು ಗ್ರಾಮವನ್ನು ಯಾವುದೇ ಪೂರ್ವ ಸಿದ್ದತೆ ಮಾಡದೇ ಹರಿಹರ ನಗರಸಭೆಗೆ ಸೇರ್ಪಡೆ ಮಾಡಿ ಆದೇಶ ನೀಡಿದ್ದು, ಗ್ರಾಮಕ್ಕೆ ಮಾರಕವಾಗಿದೆ.  ಅದನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಗ್ರಾಮದ ಸಮಾಜ ಸೇವಕ ಕರಿಬಸಪ್ಪ ಗುತ್ತೂರು ಒತ್ತಾಯಿಸಿದ್ದಾರೆ. 

ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಗ್ರಾಮದಲ್ಲಿ ಒಂದು ಬಾರಿ ಸರ್ವೇ ಮಾಡದೇ,  ಡೋರ್ ನಂ. ದಾಖಲೆ ಗಳನ್ನು ಪರಿಶೀಲನೆ ನಡೆಸದೆ ದಿಢೀರ್ ನಿರ್ಣಯ  ತೆಗೆದುಕೊಳ್ಳಲಾಗಿದೆ.  ಈಗಾಗಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಸಹ ಮಾಡಲಾಗಿ ಅದಕ್ಕೆ ಪೂರಕವಾದ ಮೀಸಲಾತಿ ಸಹ ಘೋಷಣೆ ಮಾಡಲಾಗಿದೆ. ಆದ್ದರಿಂದ ನಮ್ಮ ಗ್ರಾಮದಲ್ಲಿ ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಅವಕಾಶ ನೀಡಿ, ಮುಂದೆ ಐದು ವರ್ಷದ ನಂತರದಲ್ಲಿ ಗುತ್ತೂರು ಗ್ರಾಮವನ್ನು ಹರಿಹರ ನಗರಸಭೆಗೆ ಸೇರ್ಪಡೆ ಮಾಡಬಹುದು ಎಂದು ಅವರು ತಿಳಿಸಿದರು. 

ಈಗಾಗಲೇ ಹಲವು ಗ್ರಾಮಗಳು ನಗರ ಸಭೆ ಸೇರ್ಪಡೆ ಆವಾಗಿನಿಂದ ಇಲ್ಲಿಯವರೆಗೆ ಆ ಗ್ರಾಮಗಳಿಗೆ ನಗರಸಭೆ ವತಿಯಿಂದ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿರುವುದಿಲ್ಲ. ಆ ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತವಾಗಿ ಅಲ್ಲಿನ ಜನರು ನಗರಸಭೆಗೆ ಅಲೆದಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರಪ್ಪ ಮಾತನಾಡಿ, ಗ್ರಾಮದಲ್ಲಿ ಶೇ 70 ರಷ್ಟು ಕೂಲಿ ಕಾರ್ಮಿಕರು ಇರುವುದರಿಂದ ಹರಿಹರ ನಗರಕ್ಕೆ ಹೋಗಿ ಬಂದು ಮಾಡಲು ಆಗುವುದಿಲ್ಲ. ಇದರಿಂದಾಗಿ ಇಲ್ಲಿನ ಬಡವರಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗುತ್ತದೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ನಗರಸಭೆ ಸೇರ್ಪಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಮುಖಂಡ ಬಸವಲಿಂಗಪ್ಪ ಗೌಡ್ರು ಮಾತನಾಡಿ, ನಮ್ಮ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ 15 ಸದಸ್ಯರು ಇದ್ದು, ಓರ್ವ ತಾ.ಪಂ. ಸದಸ್ಯರು ಇದ್ದರೂ ಸಹ ಗ್ರಾಮವನ್ನು ಇದುವರೆಗೂ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇನ್ನು ನಗರಸಭೆ ಓರ್ವ ಸದಸ್ಯರು ಹೇಗೆ ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತಾರೆ? ಮತ್ತು ಹರಿಹರ ನಗರಸಭೆ ನೂತನ ಸದಸ್ಯರು 18 ತಿಂಗಳ ಆಯ್ಕೆಯಾಗಿ ಅವರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆ ಅಂತಿಮ ಘಟ್ಟವನ್ನು ತಲುಪಿಲ್ಲ ಇನ್ನೂ ನಮ್ಮ ಗ್ರಾಮವನ್ನು ಹೇಗೆ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಹನುಮಂತಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ವೆಂಕಟೇಶ್, ವಿನಾಯಕ, ಕೊಟ್ಟಪ್ಪ ಇತರರು ಹಾಜರಿದ್ದರು.

error: Content is protected !!