ನ್ಯಾಯಯುತ ಪರಿಹಾರ ಕೇಳಲು ರಾಜ್ಯ ಸರ್ಕಾರ ವಿಫಲ : ಕಿಡಿ ಕಾರಿದ ಮಾಜಿ ಸಚಿವ ಹೆಚ್.ಕೆ. ಪಾಟೀಲ್
ಹರಿಹರ, ನ.17- ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪುನರ್ ವಸತಿಗೆ ಕೇಂದ್ರದಿಂದ ನ್ಯಾಯಯುತ ಪರಿಹಾರ ಕೇಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತೊಂದರೆ ಏನೆಂದು ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಮಾಜಿ ಸಚಿವ ಡಾ.ವೈ.ನಾಗಪ್ಪ ಅವರ ಪುತ್ರ ವೈ.ಎನ್. ಮಹೇಶ್ ಅವರ ಮನೆಗೆ ನಿನ್ನೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅತಿವೃಷ್ಟಿಯಿಂದ ಕರ್ನಾಟಕ ಸೇರಿದಂತೆ, ವಿವಿಧ ರಾಜ್ಯಗಳಲ್ಲಿ ಅಪಾರ ನಷ್ಟ ಉಂಟಾಗಿದೆ. ಈ ಸಂಬಂಧ ಇತರೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ರಾಜ್ಯಕ್ಕೆ ಹೋಲಿಸಿದರೆ ಜುಜುಬಿಯಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ತಾರತಮ್ಯತೆ ಮಾಡಿದೆ. ಆದರೂ ಕೂಡ ನ್ಯಾಯಯುತ ಪರಿಹಾರ ಕೇಳಲು ರಾಜ್ಯ ಸರ್ಕಾರ ವಿಫಲವಾಗಿದೆ. ವಿಪಕ್ಷಗಳನ್ನು ಸೇರಿಸಿಕೊಂಡು ನಿಯೋಗವನ್ನು ದೆಹಲಿಗೆ ಕೊಂಡೊಯ್ದರೆ, ಪ್ರಧಾನಿ ಮೋದಿಯವರ ಜೊತೆ ವಾಸ್ತವ ಸ್ಥಿತಿ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ಕೇಳುತ್ತೇವೆ. ಸಿ.ಎಂ. ಇದಕ್ಕೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಅತಿವೃಷ್ಟಿಯಿಂದ 35 ಸಾವಿರ ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಇದನ್ನು ಸರ್ಕಾರಿ ಅಂಕಿ-ಅಂಶಗಳೇ ದೃಢಪಡಿಸುತ್ತವೆ. ಆದರೆ, ಈ ಕುರಿತು ಕೇಂದ್ರ ನೀಡಿರುವ ಪರಿಹಾರ ಜುಜುಬಿ ಕಾಸಾಗಿದೆ. ಈ ಕುರಿತು ಹೆಚ್ಚಿನ ಅನುದಾನ ಬಿಡುಗಡೆಯಾಗಬೇಕು. ಸಂಕಷ್ಟಕ್ಕೀಡಾದವರಿಗೆ ಸೂಕ್ತ ಪರಿಹಾರ ದೊರಕಿಸಬೇಕಿದೆ ಎಂದರು.
ಅತಿವೃಷ್ಟಿಯಿಂದ ಅಪಾರ ನಷ್ಟ ಉಂಟಾದರೂ ಈವರೆಗೆ ಕೇಂದ್ರದ ವೀಕ್ಷಕರಾದರೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಇದು ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದಕ್ಕೆ ಪುಷ್ಟಿ ನೀಡುತ್ತದೆ. ರಾಜ್ಯ ಸರ್ಕಾರ ಈ ಮಟ್ಟಿಗೆ ಸಹನೆ ವಹಿಸುವ ಅಗತ್ಯವಿಲ್ಲ ಎಂದರು.
ಇತ್ತೀಚಿಗೆ ನಿಧನರಾದ ಮಾಜಿ ಸಚಿವ ಡಾ.ವೈ.ನಾಗಪ್ಪ ಅವರು ತಮಗೆ ಆತ್ಮೀಯರಾಗಿದ್ದರು. ಅವರು ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗಾಗಿ ದಶಕಗಳ ಕಾಲ ಶ್ರಮಿಸಿದ್ದರು. ಅವರ ಅಗಲಿಕೆ ಯಿಂದ ನೋವಿನಲ್ಲಿರುವ ಕುಟುಂಬದವರಿಗೆ ಸಾಂತ್ವನ ಹೇಳಲು ಅವರ ಪುತ್ರನ ಮನೆಗೆ ತಾವು ಬಂದಿರುವುದಾಗಿ ಅವರು ಹೇಳಿದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ವೈ.ಎನ್.ಮಹೇಶ್, ಎಪಿಎಂಸಿ ಅಧ್ಯಕ್ಷ ಹನುಮಂತ ರೆಡ್ಡಿ, ತಾ.ಪಂ ಮಾಜಿ ಅಧ್ಯಕ್ಷ ಜಿ.ಹೆಚ್.ತಿಪ್ಪೇರುದ್ರ ರೆಡ್ಡಿ, ರಾಣೇಬೆನ್ನೂರು ಕಾಂಗ್ರೆಸ್ ಮುಖಂಡ ಕುಬೇರ್ ರೆಡ್ಡಿ, ವೈ.ಲಕ್ಷ್ಮಣ, ಬಿ.ರೇವಣಸಿದ್ದಪ್ಪ, ಸೈಯದ್ ಸನಾಉಲ್ಲಾ, ಮೊಹ್ಮದ್ ಫೈರೋಜ್, ಹೊನ್ನಪ್ಪ ಹಣಗಿ, ಮಂಜುನಾಥ್ ಇತರರಿದ್ದರು.