ಹರಪನಹಳ್ಳಿ,ನ.15- ತಾಲ್ಲೂಕಿನ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ವಿದ್ಯಾರ್ಥಿ ವೇತನ ಪಡೆಯಲು ಇದೇ ದಿನಾಂಕ 30 ಕೊನೆಯ ದಿನವಾಗಿದ್ದು, ಪೋಷಕರು ಅಗತ್ಯ ದಾಖಲಾತಿಗಳನ್ನು ಸಂಬಂಧಿಸಿದ ಶಿಕ್ಷಕರಿಗೆ ನೀಡಿ ನೋಂದಾಯಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಆರ್‍ಪಿ ಹೆಚ್.ಸಮೀರ್ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಶಾಲೆಗಳು ಆರಂಭವಾಗದಿರುವ ಕಾರಣ ಅಲ್ಪ ಸಂಖ್ಯಾತ ಮಕ್ಕಳ ಶೈಕ್ಷಣಿಕ ಪ್ರೋತ್ಸಾಹಕ್ಕೆ ಸರ್ಕಾರ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಪಡೆಯಲು ಆನ್‍ಲೈನ್‍ನಲ್ಲಿ ನೋಂದಾಯಿಸಬೇಕೆಂದು ಕರೆ ನೀಡಿದರು.
ಜೈನ್, ಬೌದ್ದ, ಕ್ರೈಸ್ತರು ಹಾಗೂ ಮುಸ್ಲಿಂ ಸಮಾಜದ ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿಗಳು ವೇತನ ಪಡೆಯಲು ಅರ್ಹರಾಗಿರುತ್ತಾರೆ. ತಾಲ್ಲೂಕಿನ ಶಿಕ್ಷಣ ಇಲಾಖೆಯ ಅಲ್ಪ ಸಂಖ್ಯಾತರ ಘಟಕ ಇನ್ನೂ ದಾವಣಗೆರೆ ಜಿಲ್ಲೆಯಲ್ಲಿದೆ. ಆದ್ದರಿಂದ ಪೋಷಕರು ಆನ್‍ಲೈನ್ ಅರ್ಜಿ ಸಲ್ಲಿಸುವಾಗ ದಾವಣಗೆರೆ ಜಿಲ್ಲೆ ಎಂದು ನಮೂದಿಸ ಬೇಕಾಗಿದೆ. ಜಿಲ್ಲೆಯಲ್ಲಿ 38600 ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿದ್ದಾರೆ. ಆದರೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವುದು ಕೇವಲ 9600 ಮಕ್ಕಳು ಮಾತ್ರ. ಆದ್ದರಿಂದ ಕೂಡಲೇ ಅರ್ಜಿ ಸಲ್ಲಿಸುವಂತೆ ಆಯಾ ಶಾಲೆಗಳಲ್ಲಿ ಮತ್ತು ಚರ್ಚ್, ಮಸೀದಿ ಹಾಗೂ ಜೈನರಲ್ಲೂ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ತಾಲ್ಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎ.ಮೂಸಾ ಸಾಬ್ ಮಾತನಾಡಿ, ಸರ್ಕಾರಿ ಪದವಿ ಕಾಲೇಜುಗಳಲ್ಲಿ 2ಎ, 3ಎ ಹಾಗೂ 3ಬಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿ ಮಾಡಿರುವ ಶುಲ್ಕವನ್ನು ಕಡೆಗಣಿಸಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ನಿಗದಿ ಮಾಡಿರುವ ಶುಲ್ಕವನ್ನು ಪಡೆಯುತ್ತಿರುವುದು ಸರಿಯಲ್ಲ. ಕೂಡಲೇ ಶುಲ್ಕವನ್ನು ರಿಯಾಯಿತಿ ಗೊಳಿಸಿ ಪ್ರವೇಶ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಲ್ಪ ಸಂಖ್ಯಾತ ನಿಗಮದಿಂದ 105 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪ್ರತಿ ತಾಲ್ಲೂಕಿಗೆ 90 ರಿಂದ 100 ಫಲಾನಭವಿಗಳನ್ನು ಆಯ್ಕೆ ಮಾಡಿ ಶ್ರಮ ಶಕ್ತಿ ಹಾಗೂ ಮಹಿಳಾ ಮೈಕ್ರೋ ಸಾಲ ಯೋಜನೆಯಲ್ಲಿ ಹಣ ನೀಡಲಾಗುವುದು. ಬೀದಿಬದಿ ವ್ಯಾಪಾರ, ಹೈನುಗಾರಿಕೆ ಇನ್ನೂ ಮುಂತಾದ ವ್ಯಾಪಾರಕ್ಕೆ ಹಣ ನೀಡಲು ನಿಗಮ ಮಾರ್ಗ ಸೂಚಿ ನೀಡಿದೆ. ಡಿಸೆಂಬರ್ 10 ರೊಳಗೆ ಅರ್ಹರು ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪಟ್ಟಣದ ಅಲ್ಪ ಸಂಖ್ಯಾತರ ಕಛೇರಿಯಿಂದ ಪಡೆಯಬಹುದು.
ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ರುಕ್ಸಾನ ಬೇಗಂ, ಮುಖಂಡರಾದ ದಾದಾಪೀರ್, ಖಲಂದರ್, ಮನ್ಸೂರ್, ಸೈಯದ್ ಮೌಲಾನಾ, ರಿಯಾಜ್, ದಾವೂದ್ ಸೇರಿದಂತೆ ಇತರರಿದ್ದರು.