ದಾವಣಗೆರೆ, ನ. 11- ಸಮೀಪದ ಆವರಗೆರೆ ಯಲ್ಲಿರುವ ಶ್ರೀ ಭಗವಾನ್ ಮಹಾವೀರ ಗೋಶಾಲೆ ಯಲ್ಲಿ 650 ಕ್ಕೂ ಹೆಚ್ಚು ದನ-ಕರುಗಳಿವೆ. ಇದರಲ್ಲಿ ಬಹಳಷ್ಟು ದನ-ಕರುಗಳು ಅನಾಥವಾಗಿದ್ದು, ಕಾಯಿಲೆಯಿಂದ ನರಳುತ್ತಿವೆ ಮತ್ತು ಮುದಿಯಾಗಿವೆ.
ಈ ರೀತಿಯ ಹಸುಗಳನ್ನು ಇಲ್ಲಿ ಆರೋಗ್ಯಕರ ವಾತಾವರಣದಲ್ಲಿರಿಸಿ, ಅವುಗಳಿಗೆ ಸಾಕಷ್ಟು ಮೇವು ಒದಗಿಸಿ ಮತ್ತು ಪರಿಣಿತ ವೈದ್ಯರಿಂದ ಶುಶ್ರೂಷೆ ಕೊಡಿಸಲಾಗುತ್ತಿದೆ. ಇದೆಲ್ಲದರ ನಿರ್ವಹಣೆಯನ್ನು ಹಲವಾರು ವರ್ಷಗಳಿಂದ ಗೋಶಾಲೆಯ ಟ್ರಸ್ಟ್ ಮೂಲಕ ನಡೆಸಲಾಗುತ್ತಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ನಿರ್ವಹಣಾ ವೆಚ್ಚ ಹೆಚ್ಚಾಗಿ ಮತ್ತು ದೇಣಿಗೆ ಬರುವುದು ಕಡಿಮೆಯಾಗಿ ಇಲ್ಲಿರುವ ಗೋವುಗಳು ಸಂಕಷ್ಟದಲ್ಲಿವೆ.
ಈ ಗೋವುಗಳಿಗೆ ಪ್ರಮುಖ ಆಹಾರವಾದ ಹುಲ್ಲನ್ನು ಒದಗಿಸಬೇಕಾಗಿದೆ. ಈಗ ದಾವಣಗೆರೆಯಲ್ಲಿ ಭತ್ತದ ಕಟಾವು ಭರದಿಂದ ನಡೆಯುತ್ತಿದ್ದು, ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ ಹುಲ್ಲನ್ನು ಈ ಗೋಶಾಲೆಗೆ ದಾನ ಮಾಡಬೇಕೆಂದು ಟ್ರಸ್ಟ್ ಮನವಿ ಮಾಡಿದೆ.
ಸಾರ್ವಜನಿಕರು ತಮ್ಮ ಹುಟ್ಟುಹಬ್ಬ ಅಥವಾ ಯಾವುದೇ ವಿಶೇಷ ಸಂದರ್ಭಕ್ಕೆ ಇಲ್ಲಿನ ಕಛೇರಿ ಯಲ್ಲಿ ಕನಿಷ್ಟ ರೂ.3000/-ಗಳನ್ನು ದೇಣಿಗೆಯ ರೂಪದಲ್ಲಿ ನೀಡಿದರೆ ಅದರಿಂದ ಒಂದು ಗಾಡಿ ಹಸಿರು ಹುಲ್ಲನ್ನು ಗೋವುಗಳಿಗೆ ನೀಡಬಹುದಾಗಿದೆ. ಸಹೃದಯಿ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ ಹುಲ್ಲನ್ನು ನೀಡಬೇಕೆಂದು ಟ್ರಸ್ಟ್ ವಿನಂತಿಸಿದೆ. ವಿವರಗಳಿಗೆ ಜಿತೇಂದ್ರ ಜೈನ್ (9448516033), ದಿನೇಶ್ ಜೈನ್ (9980339333) ಅವರನ್ನು ಸಂಪರ್ಕಿಸಬಹುದು.