ಜಗಳೂರು, ನ.10- ಸ್ಕೀಂ ಗಳಿಗೆ ಬಲಿಯಾಗಿ ನಿಮ್ಮ ಸುಖ ಕಳೆದು ಕೊಳ್ಳದೇ ರೈತರಿಗೆ ಬೆನ್ನಲಬಾಗಿ ಗುಣಮಟ್ಟದ ಬೀಜ, ಗೊಬ್ಬರಗಳನ್ನು ನೀಡುವಂತೆ ಬೀಜ ಮತ್ತು ಗೊಬ್ಬರ ಮಾರಾಟಗಾರರಿಗೆ ಶಾಸಕ ಎಸ್.ವಿ. ರಾಮಚಂದ್ರ ಸಲಹೆ ನೀಡಿದರು.
ಕೃಷಿ ಇಲಾಖೆಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಸುರಕ್ಷಿತ ಕೀಟನಾಶಕ ಬಳಕೆ ಹಾಗೂ ಬೀಜೋಪಚಾರ ಆಂದೋಲನ ಕುರಿತು ತರಬೇತಿ ಹಾಗೂ ತಾಲ್ಲೂಕಿನ 6 ಜನ ರೈತರಿಗೆ 2019-20 ನೇ ಸಾಲಿನಲ್ಲಿ ಆತ್ಮ ಯೋಜನೆ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಬೀಜ ಮತ್ತು ಗೊಬ್ಬರ ಮಾರಾಟಗಾರರು ರೈತರಿಗಾಗಿ ಉತ್ತಮ ಸೇವೆ ಮಾಡುತ್ತಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಬೀಜ ಕೊಟ್ಟರೂ ಸಹ ಸರಿಯಾಗಿ ಬೀಜಗಳು ಹುಟ್ಟಿಲ್ಲ, ಕಳಪೆ ಬೀಜ ನೀಡಿದ್ದಾರೆ ಎಂಬ ಆರೋಪಗಳು ಬರುತ್ತಿವೆ. ಡೀಲರ್ಗಳು ಜಾಗೃತರಾಗಿ ತಾವು ಲಾಭ ಮಾಡಿಕೊಳ್ಳುವ ಜೊತೆಗೆ ರೈತರಿಗೂ ಅನುಕೂಲ ಮಾಡಿಕೊಡಬೇಕು.
ಉಪ ಕೃಷಿ ನಿರ್ದೇಶಕ ಕೆ.ಎಸ್.ಶಿವಕುಮಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಯೋಜನೆಯ ಬಳಕೆಯನ್ನು ರೈತರು, ಕೃಷಿ ಪರಿಕರ ಮಾರಾಟಗಾರರು ಬಳಕೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು
ಜಿ.ಪಂ.ಸದಸ್ಯ ಎಸ್.ಕೆ ಮಂಜುನಾಥ್, ವಹಿಸಿದ್ದರು. ಜಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸಲು, ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಪ್ರಸಾದ್, ಸಂಪನ್ಮೂಲ ವ್ಯಕ್ತಿ ಸುನೀಲ್ಕುಮಾರ್, ಜಾಗೃತಿ ಸಮಿತಿ ಸದಸ್ಯ ತಿಪ್ಪೇಸ್ವಾಮಿ, ಬಾಯರ್ ಕಂಪನಿಯ ವ್ಯವಸ್ಥಾಪಕ ಸಂತೋಷ್, ಹರ್ಷ,
ರೇಣು ಕುಮಾರ, ಕೃಷಿ ಅಧಿಕಾರಿ ಜೀವಿತ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.