ಉಕ್ಕಡಗಾತ್ರಿ ಬಳಿ ನೂರಾರು ಎಕರೆ ಭತ್ತದ ನಾಟಿ ಮುಳುಗಡೆ
ಶಿವಮೊಗ್ಗ, ಆ.6- ರಾಜ್ಯದ ಮಲೆನಾಡಿನಲ್ಲಿ ಗುರುವಾರವೂ ವರುಣನ ಅರ್ಭಟ ಮುಂದುವರಿದಿದ್ದು, ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಭದ್ರಾ, ತುಂಗಾ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.
ಕೊರೊನಾ ಭೀತಿಯ ನಡುವೆ ಮಲೆನಾಡು, ಕರಾವಳಿ ಭಾಗದ ಜನರು ಈ ಆಶ್ಲೇಷ ಮಳೆಯ ಒಡೆತಕ್ಕೆ ತತ್ತರಿಸಿದ್ದಾರೆ. ಮಲೆನಾಡಿನಲ್ಲಿ ಮಳೆ ಆತಂಕ ಸೃಷ್ಟಿಸಿರುವುದರ ಜೊತೆಗೆ ತುಂಗಭದ್ರಾ ನದಿ ಪಾತ್ರದ ಜನರನ್ನೂ ನಿದ್ದೆಗೆಡಿಸಿದೆ.
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 10 ರವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಮಸೂರಿನ ಮದಗದ ಕೆರೆ ಕೋಡಿ ಬಿದ್ದಿದೆ.
ತುಂಗಾದಿಂದ ಹೆಚ್ಚಿನ ನೀರು : ತುಂಗಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಗಾಜನೂರಿನ ತುಂಗಾ ಜಲಾಶಯಕ್ಕೆ ಗುರುವಾರ ಸಂಜೆ 65 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಒಳ ಬರುವ ಎಲ್ಲಾ ನೀರನ್ನು ನದಿಗೆ ಬಿಡಿಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನಮಟ್ಟ ಇಂದು ಸಂಜೆ ಮತ್ತಷ್ಟು ಹೆಚ್ಚಾಗಿದೆ.
ಜಲಾಶಯಕ್ಕೆ ಬರುವ ನೀರಿನ ಒಳಹರಿವು ಮಳೆ ಪ್ರಮಾಣ ಆಧರಿಸಿ, ಹೆಚ್ಚು-ಕಡಿಮೆ ಆಗುತ್ತಿರುತ್ತದೆ. ಸಂಜೆ ಹೆಚ್ಚಾಗಿದ್ದ ಒಳಹರಿವು ಬೆಳಿಗ್ಗೆ ಹೇಗೆ ಕಡಿಮೆ ಆಯಿತೆಂದು ಯಾರೂ ಗೊಂದಲಕ್ಕೆ ಒಳಗಾಗಬಾರದು.
ಒಳಹರಿವಿನ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ನಾವು ಸಂಜೆ ವೇಳೆಯಲ್ಲೂ ನೀರಿನ ಮಟ್ಟ ತಿಳಿದುಕೊಂಡು ಪ್ರಕಟಿಸುತ್ತಿದ್ದೇವೆ.
ಉಕ್ಕಡಗಾತ್ರಿ ಸಮೀಪ ನೂರಾರು ಎಕರೆ ಭತ್ತದ ನಾಟಿ, ಪಂಪ್ಸೆಟ್ಗಳು ನೀರಿನ ಮುಳುಗಿವೆ. ಅಲ್ಲದೇ, ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ದೇವಸ್ಥಾನದ ಜವಳ ಮಂದಿರ ಮುಳುಗಡೆಯಾಗಿದ್ದು, ನದಿ ನೀರು ದೇವಸ್ಥಾನದ ತಲುಪಲು 8-10 ಮೆಟ್ಟಿಲು ಬಾಕಿ ಇದೆ ಎಂದು ಹೇಳಲಾಗಿದೆ.
ಕಳೆದ ವರ್ಷ ತುಂಗಾ ಜೊತೆಗೆ ಭದ್ರಾ ಜಲಾಶಯದ ನೀರನ್ನು ಹೊರಬಿಟ್ಟಿದ್ದರಿಂದ ಉಕ್ಕಡಗಾತ್ರಿ ನಡುಗಡ್ಡೆಯಾಗಿತ್ತು. ಸಾರಥಿ-ಚಿಕ್ಕಬಿದರಿ ನಡುವೆ ಸಂಪರ್ಕ ಸೇತುವೆಯೂ ನದಿ ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಭದ್ರೆಗೆ ಭಾರೀ ನೀರು : ಭದ್ರಾ ಜಲಾನಯನ ಪ್ರದೇಶವಾದ ಕುದುರೆಮುಖ, ಹೊರನಾಡು, ಕಳಸ, ಬಾಳೇಹೊನ್ನೂರು, ಕೊಪ್ಪ ಮತ್ತಿತರ ಕಡೆಗಳಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಭದ್ರಾ ನದಿ ಉಕ್ಕಿ ಹರಿಯುತ್ತಿದೆ.
ಭದ್ರಾ ಜಲಾಶಯಕ್ಕೆ ಇಂದು ಬೆಳಿಗ್ಗೆ 35,875 ಕ್ಯೂಸೆಕ್ಸ್ ಇದ್ದ ನೀರಿನ ಒಳಹರಿವು ಸಂಜೆ 5 ಗಂಟೆ ವೇಳೆಗೆ 50 ಸಾವಿರ ಕ್ಯೂಸೆಕ್ಸ್ ತಲುಪಿತ್ತು. ನೀರಿನಮಟ್ಟ 161 ಅಡಿ 6 ಇಂಚು ಆಗಿತ್ತು.
ನಾಳೆ ಶುಕ್ರವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯದ ನೀರಿನ ಮಟ್ಟ 163 ಅಡಿ ತಲುಪುವ ಸಾಧ್ಯತೆ ಇದ್ದು, ಒಳ ಹರಿವಿನಲ್ಲಿ ವ್ಯತ್ಯಾಸ ಆಗಬಹುದೆಂದು ಭದ್ರಾ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.