ದಾವಣಗೆರೆ, ಆ.6- ನಗರದ ಅತಿ ಸಮೀಪವಿರುವ ಬಾತಿ ಕೆರೆಯನ್ನು ಅಭಿವೃದ್ಧಿಪಡಿ ಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ವತಿಯಿಂದ ಇಂದು ಕೆರೆ ಬಳಿ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಬಾತಿ ಕೆರೆಯನ್ನು ಈಗಾಗಲೇ ಒತ್ತುವರಿ ಮಾಡಲಾಗಿದೆ. ಇದರಿಂದ ಕರೆಯಲ್ಲಿ ನೀರು ಕಡಿಮೆ ಆಗುತ್ತದೆ. ನಗರದ ಜನತೆಗೆ ಅನುಕೂಲ ಉಂಟು ಮಾಡುವ ಈ ಕೆರೆಯು ಅಭಿವೃದ್ಧಿಯಾಗದೇ ನಿರ್ಲಕ್ಷ್ಯಕ್ಕೆ ಒಳಾಗಾಗಿದೆ ಎಂದು ಪಕ್ಷದ ಮುಖಂಡ ಹೆಚ್.ಕೆ. ರಾಮಚಂದ್ರಪ್ಪ ಆರೋಪಿಸಿದರು.
ಬಾತಿ ಕೆರೆಯನ್ನು ನೀರಾವರಿ ಇಲಾಖೆಯ ಮಾಹಿತಿ ಪ್ರಕಾರ ಅಳತೆ ಮಾಡಿಸಿ, ಹದ್ದುಬಸ್ತು ಮಾಡಿಸಬೇಕು. ಈಗಾಗಲೇ ಒತ್ತುವರಿ ಆಗಿರುವ ಪ್ರದೇಶವನ್ನು ತೆರವುಗೊಳಿಸಬೇಕು. ಕೆರೆಯಲ್ಲಿನ ಹೂಳನ್ನು ತೆಗೆಸಿ ಅಳ ಮಾಡಿಸಬೇಕು. ಕೆರೆಯ ಸುತ್ತಲು ಕಾಂಪೌಂಡ್ ಹಾಕಿಸಬೇಕು. ಕೆರೆ ಒತ್ತುವರಿ ಮಾಡಿರುವುದನ್ನು ಕಂಡು ಕಾಣದಂತೆ ಇರುವ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಆಗ್ರಹಿಸಿದರು.
ಪಕ್ಷದಿಂದ ಈಗಾಗಲೇ ಎರಡು ಬಾರಿ ನಿಯೋಗವೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಬಾತಿ ಕೆರೆಯ ಒತ್ತುವರಿ ತೆರವು ಮಾಡಲು ಮನವಿ ನೀಡಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಇನ್ನಾದರೂ ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಕೆರೆಯ ರಸ್ತೆಯಲ್ಲಿ ನಿರಂತರ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೂದಾಳ್ ರಸ್ತೆ ನಗರ ಪಾಲಿಕೆ ಸ್ಮಶಾನ, ಹಾಗೂ ಎಸ್ಓಜಿ ಕಾಲೋನಿ ಎಸ್ಎಸ್ ಹೈಟಿಕ್ ಬಳಿ ಇರುವ ಪಾಲಿಕೆ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರದ ವ್ಯವಸ್ಥೆ ಮಾಡಬೇಕು. ನಗರ ಪಾಲಿಕೆ ವ್ಯಾಪ್ತಿಯ ಅಜಾದ್ ನಗರದ ಮಿರ್ಜಾ ಇಸ್ಮಾಯಿಲ್, ಎನ್.ಆರ್. ಪೇಟೆ, ಬೀಡಿ ಲೇಔಟ್ ಬಡಾವಣೆಯಲ್ಲಿದ್ದ ಕಾರ್ಮಿಕರ ಇಎಸ್ಐ ಆಸ್ಪತ್ರೆ ಕಾರಣಾಂತರಗಳಿಂದ ಮುಚ್ಚಿದ್ದು, ಇದರಿಂದ ಸ್ಥಳೀಯ ಕಾರ್ಮಿಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ಪುನಃ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಆನಂದರಾಜ್, ಆವರಗೆರೆ ವಾಸು, ಐರಣಿ ಚಂದ್ರು, ದಾದಾಪೀರ್, ತಿಪ್ಪೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.