ಹೊನ್ನಾಳಿ : ಶ್ರೀರಾಮನಿಗೆ ವಿಶೇಷ ಪೂಜೆ

ಹೊನ್ನಾಳಿ, ಆ. 6 – ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಶಿಲಾನ್ಯಾಸ ನೆರವೇರಿಸಿದ ಹಿನ್ನೆಲೆಯಲ್ಲಿ ಅವಳಿ ತಾಲ್ಲೂಕಿನಾದ್ಯಂತ ಪಕ್ಷಾತೀತವಾಗಿ ಸಿಹಿ ವಿತರಿಸಿ ಸಂಭ್ರಮಿಸಿದ್ದಲ್ಲದೆ ರಾಮನಾಮ ಜಪದಲ್ಲಿ ಮುಳುಗಿದ್ದರು.

ಹೊನ್ನಾಳಿ, ನ್ಯಾಮತಿ, ಸಾಸ್ವೇಹಳ್ಳಿ, ಕುಂದೂರು, ಚೀಲೂರು, ಬೆಳಗುತ್ತಿ, ಸವಳಂಗ ಸೇರಿದಂತೆ ಎಲ್ಲಾ ಗ್ರಾಮಗಳಲ್ಲೂ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಮನ ಭಜನೆ ಮಾಡಿ, ನಮ್ಮ ಜೀವಿತಾವಧಿಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಅಡಿಗಲ್ಲನ್ನು ಇಟ್ಟಿರುವುದು ಸಂತಸ  ತಂದಿದೆ, ನಮ್ಮ ಇರುವಿಕೆಯಲ್ಲೇ ಮಂದಿರ ನಿರ್ಮಾಣ ಮುಗಿದು ಶ್ರೀರಾಮನ ದರ್ಶನ  ಮಾಡಿದರೆ ನಮ್ಮ ಜನ್ಮ ಸಾರ್ಥಕ ಎಂದು ಪಟ್ಟಣದ  ಮನದಾಳದ ಮಾತಾಗಿತ್ತು.

ಹಿರೇಮಠ ಗ್ರಾಮದ ಹಿರಿಯ ಕರಸೇವಕರಾದ ಚಂದ್ರಪ್ಪಗೌಡ್ರು  ಮಾತನಾಡಿ, ಹೊನ್ನಾಳಿಯಿಂದ ಕರಸೇವಕನಾಗಿ ಅಯೋಧ್ಯೆಗೆ ಹೋಗಲು ಅವಕಾಶ ಸಿಕ್ಕಾಗ ನನಗಾದ ಸಂತಸಕ್ಕೆ ಮಿತಿಯೇ ಇರಲಿಲ್ಲ. 

ಅಯೋಧ್ಯೆಗೆ ಹೋಗುವ ಮಾರ್ಗದಲ್ಲಿ ನಮಗೆ ಅಭೂತಪೂರ್ವ ಸ್ವಾಗತ, ಊಟ, ಉಪಚಾರ ಎಲ್ಲವೂ ಸಿಗುತ್ತಿತ್ತು, ಆದರೆ, ನಾವು ಕರಸೇವಕರಾಗಿ ಅಲ್ಲಿ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶ ಇದ್ದುದರಿಂದ ನಾವು ಎಲ್ಲಿಯೂ ತಂಗದೆ ಪೊಲೀಸರನ್ನು ಕಣ್ತಪ್ಪಿಸಿ ಹೋಗುತ್ತಿದ್ದೆವು, ಕರಸೇವಕರು ಜೈ ಶ್ರೀರಾಂ ಎಂದು ಘೋಷಣೆ ಕೂಗುತ್ತಿದ್ದರೆ ನಾವು ರೋಮಾಂಚನ ಗೊಳ್ಳುತ್ತಿದ್ದೆವು. ಕೊನೆಗೆ ಅಯೋಧ್ಯೆ ತಲುಪಿಯೇ ಬಿಟ್ಟೆವು, ಅಷ್ಟು ಹೊತ್ತಿಗಾಗಲೇ  ಕರಸೇವಕರು ಗುಲಾಮಿ ಸಂಕೇತದ ಮಸೀದಿಯನ್ನು ಬೀಳಿಸಿಯೇ ಬಿಟ್ಟಿದ್ದರು. ನಾವೆಲ್ಲರೂ ಸಹ ಘೋಷಣೆ ಕೂಗುತ್ತ ಕರಸೇವೆ ಮಾಡಿದ್ದೆವು. ಈಗ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದೆ. ಮಂದಿರ ಪೂರ್ಣ ಆಗಿರುವುದನ್ನು ನೋಡಿದರೆ ನಮ್ಮ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದು ಕರಸೇವಕರು ತಮ್ಮ ಅನುಭವವನ್ನು ಹಂಚಿಕೊಂಡರು.

ಪೊಲೀಸ್ ಬಂದೋಬಸ್ತ್ : ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಅವಳಿ ತಾಲ್ಲೂಕಿನಾದ್ಯಂತ ಪೊಲೀಸ್ ಬಿಗಿ ಬಂದೋಸ್ತ್ ಮಾಡಿದ್ದರು. ಸಿಪಿಐ ದೇವರಾಜ್, ಪಿಎಸ್ಐ ಗಳಾದ ತಿಪ್ಪೇಸ್ವಾಮಿ, ಹನುಮಂತಪ್ಪ ಶಿರಿಹಳ್ಳಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದರು.

error: Content is protected !!