ಮಲೆನಾಡಿನಲ್ಲಿ ಮಳೆ : ಭದ್ರೆಗೆ 45 ಸಾವಿರ ಕ್ಯೂಸೆಕ್ಸ್ ಒಳಹರಿವು

ತುಂಗಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ತುಂಗಾಭದ್ರ ನದಿಗೆ ಬಿಡಲಾಗಿದೆ

ತುಂಗಾ ಡ್ಯಾಂನಿಂದ 56 ಕ್ಯೂಸೆಕ್ಸ್ ನೀರು ನದಿಗೆ

ಶಿವಮೊಗ್ಗ, ಆ. 5- ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರ ಮತ್ತಷ್ಟು ಜೋರಾಗಿದೆ. ಭಾರೀ ಮಳೆಯಿಂದಾಗಿ ಭದ್ರಾ ಮತ್ತು ತುಂಗಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಹೊರನಾಡು ಮತ್ತು ಕಳಸ ನಡುವೆ ಭದ್ರಾ ನದಿ ಸೇತುವೆ ಮುಳುಗಡೆಯಾಗಿದೆ. ಬಾಳೂರು ಸಮೀಪ ಗುಡ್ಡ ಕುಸಿಯುವ ಭೀತಿಯಲ್ಲಿದೆ.

ಗಾಜನೂರಿನ ತುಂಗಾ ಜಲಾಶಯಕ್ಕೆ 56 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು, ಡ್ಯಾಂನ 21 ಕ್ರಸ್ಟ್‌ಗೇಟ್‌ಗಳ ಮೂಲಕ ಒಳ ಬರುವ ಅಷ್ಟೂ ನೀರನ್ನು ನದಿಗೆ ಬಿಡಲಾಗಿದೆ.

ಇದರಿಂದಾಗಿ ನಂದಿಗುಡಿ ಬಳಿ ತುಂಗಭದ್ರಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಉಕ್ಕಡಗಾತ್ರಿ-ಪತ್ತೇಪುರ ನಡುವಿನ ಸಂಪರ್ಕ ರಸ್ತೆ ನದಿ ಹಿನ್ನೀರಿನಲ್ಲಿ ಮುಳುಗಡೆ ಆಗಿದೆ. ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ದೇವಸ್ಥಾನದ  ಮೆಟ್ಟಿಲುಗಳು ನದಿ ನೀರಿನಲ್ಲಿ ಮುಳುಗಿವೆ. ತುಂಗಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ತುಂಗಭದ್ರಾ ನದಿ ಪಾತ್ರದ ಗೋವಿನಹಾಳ್, ನಂದಿಗುಡಿ, ಉಕ್ಕಡಗಾತ್ರಿ, ಪಾಳ್ಯ, ಮಳಲಹಳ್ಳಿ, ಹುಲಗಿನ ಹೊಳೆ, ಇಂಗಲಗೊಂದಿ ಮತ್ತಿತರ ಗ್ರಾಮಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಲೇಬೆನ್ನೂರು ಉಪ ತಹಸೀಲ್ದಾರ್ ಆರ್. ರವಿ ಮನವಿ ಮಾಡಿದ್ದಾರೆ.

ಜಾಗೃತಿ ಕುರಿತು ನದಿ ಪಾತ್ರದ ಹಳ್ಳಿಗಳಲ್ಲಿ ಪ್ರಚಾರ ಪಡಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ರವಿ ಸೂಚಿಸಿದ್ದಾರೆ.

ಭದ್ರಾ ಒಳ ಹರಿವು ಹೆಚ್ಚಳ : ಭದ್ರಾ ಜಲಾನಯನ ಪ್ರದೇಶದಲ್ಲೂ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ಭದ್ರಾ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಬುಧವಾರ ಬೆಳಿಗ್ಗೆ 22,203 ಕ್ಯೂಸೆಕ್ಸ್ ಇದ್ದ ನೀರಿನ ಒಳಹರಿವು ಸಂಜೆ ವೇಳೆಗೆ 45 ಸಾವಿರ ಕ್ಯೂಸೆಕ್ಸ್ ದಾಟಿತ್ತು. ಜಲಾಶಯದ ನೀರಿನ ಮಟ್ಟ 158 ಅಡಿ ಆಗಿತ್ತು.

ಹವಾಮಾನ ಇಲಾಖೆಯಪ್ರಕಾರ ಮಲೆನಾಡಿನಲ್ಲಿ ಆಗಸ್ಟ್ 8ರವರೆಗೂ ಇದೇ ರೀತಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಕಳೆದ ವರ್ಷವೂ ಆಗಸ್ಟ್ ತಿಂಗಳ ಮೊದಲ ವಾರದಲ್ಲೇ ಮಹಾ ಮಳೆ ಸುರಿದು ಭದ್ರಾ ಜಲಾಶಯ ಅಷ್ಟೇ ಅಲ್ಲ, ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದವು. ಉತ್ತರ ಕರ್ನಾಟಕದಲ್ಲಿ ಅತಿವೃಷ್ಠಿಯಾಗಿತ್ತು.

ವಾತಾವರಣ ನೋಡಿದರೆ ಈ ಬಾರಿಯೂ ಇನ್ನೂ ಭಾರೀ ಮಳೆಯಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಮಲೆನಾಡಿನಲ್ಲಿರುವ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಸಂತಸ : ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವುದು ಅಚ್ಚುಕಟ್ಟಿನ ರೈತರಿಗೆ ಇನ್ನಿಲ್ಲದ ಸಂತಸ ತಂದಿದೆ.

ಕಳೆದ ವಾರ ಒಳಹರಿವು ಕುಸಿದಿದ್ದರಿಂದ ರೈತರು ಆತಂಕಗೊಂಡು ನಾಟಿ ಮಾಡಬೇಕಾ ಬೇಡವೋ ಎಂಬ ಗೊಂದಲಕ್ಕೆ ಒಳಗಾಗಿದ್ದರು. ರೈತರ ಆತಂಕ, ಕಷ್ಟ ಆಲಿಸಿದ ಮಳೆ ದೇವ ಕೃಪೆ ತೋರಿದ್ದರಿಂದ ಎಲ್ಲಾ ಕಡೆ ಉತ್ತಮ ಮಳೆಯಾಗುತ್ತಿದೆ.

ಈ ಬಾರಿಯೂ ಭದ್ರಾ ಜಲಾಶಯ ಭರ್ತಿಯಾಗಲಿ ಎಂಬುದು ರೈತರ ಆಶಯವಾಗಿದೆ.

error: Content is protected !!