ದುಷ್ಟ ಆಲೋಚನೆ ಆರೋಗ್ಯಕ್ಕೆ ಹಾನಿಕಾರಕ

ಚಿತ್ರದುರ್ಗ, ಆ.4-  ನಮ್ಮ ಆರೋಗ್ಯ ನಮ್ಮ ಆಲೋಚನೆಗಳನ್ನು ಒಳಗೊಂಡಿರುತ್ತದೆ. ದುಷ್ಟ ಆಲೋಚನೆ ಆರೋಗ್ಯವನ್ನು ಹಾಳು ಮಾಡುತ್ತದೆ. ಶರಣರ ಚಿಂತನೆಗಳ ಮೂಲಕ ಉತ್ತಮ ಆಲೋಚನೆಗಳನ್ನು ಪರಿಷ್ಕರಿಸಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದಿಂದ ನಡೆಯುತ್ತಿರುವ ಶ್ರಾವಣ ದರ್ಶನ ನಾಲ್ಕನೇ ದಿನದ ಫೇಸ್‌ಬುಕ್ ಮತ್ತು ಯುಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ `ಬದುಕು ಮತ್ತು ನಿಯಂತ್ರಣ’ ವಿಷಯ ಕುರಿತು ಶ್ರೀಗಳು ಮಾತನಾಡಿದರು.

ಬದುಕು ಭಾವನೆಗಳ ಸಂಗಮ. ಭಾವನೆಗಳ ಜೊತೆಯಲ್ಲಿ ಜೀವನ ಸಾಗಬೇಕು. ಆ ಸಂಗಮವೆ ಜಂಗಮ. ಭಾವನೆಗಳ ಸಂಗಮ ಅವನೇ ನಿಜವಾದ ಜಂಗಮ. ಜಂಗಮ ಎಂದರೆ ಚಲನಶೀಲತೆ. ಕ್ರಿಯಾ ಶೀಲತೆ ಜೊತೆಯಲ್ಲಿ ಸಾಗಬೇಕು. ಮಹತ್ತರವಾದ ಬದುಕು ಅನ್ನಿಸಿಕೊಳ್ಳುವ ದಿಶೆಯಲ್ಲಿ ಸಾಗಬೇಕು. ನಮ್ಮ ಹಿಂದಿನ ಬದುಕನ್ನು ನೆನಪಿಸಿಕೊಂಡರೆ ನಾವುಗಳು ಅಂದು ಮುಗ್ಧರಾಗಿರುತ್ತೇವೆ. ಮುಗ್ಧ ಮಾನವನನ್ನು ಪ್ರಬುದ್ಧ ಮಾನವನನ್ನಾಗಿ ರೂಪಿಸಿಕೊಂಡವರು ಯಾರು. ನಮ್ಮ ಬದುಕಿನ ಶಿಲ್ಪಿ ನಾವೇ ಆಗಿದ್ದೇವೆ.  ಸಮಾಜ ಒಂದು ಮುಕ್ತ ವಿಶ್ವವಿದ್ಯಾಲಯದಂತೆ. ಅದು ಎಂತಹವರನ್ನೂ ಪಳಗಿಸುತ್ತದೆ ಎಂದರು.

ಬೌದ್ಧಿಕಯಾನ ಪ್ರಬುದ್ಧವಾದ ಆಟ. ಶಬ್ಧಗಳ ಜೊತೆಯಲ್ಲಿ ಅನುಭಾವದ ಜೊತೆಯಲ್ಲಿ ನಡೆಯುವ ಆಟ. ಬದುಕಿಗೆ ಬೇಕು ಒಂದಿಷ್ಟು ನಿಯಂತ್ರಣ. ನಿಯಂತ್ರಣ ಕಳೆದುಕೊಂಡರೆ ಅಪಘಾತವಾಗುತ್ತದೆ. ಶರೀರ ಎನ್ನುವುದನ್ನು ಶರಣರು ಬಂಡಿಗೆ ಹೋಲಿಸಿ ದ್ದಾರೆ. ತುಂಬಿದ ಬಂಡಿಯನ್ನು ಜಾಗರೂಕತೆಯಿಂದ ನಡೆಸಬೇಕು. ಬಂಡಿಯರೊಡೆವರು ಐವರು ಮಾನ ಸರು, ಒಬ್ಬರಿಗೊಬ್ಬರು ಸಮನಿಲ್ಲವಯ್ಯ- ಅಂದರೆ, ವಿಭಿನ್ನವಾದ ಅಭಿಪ್ರಾಯಗಳು. ಅದರಿಚ್ಛೆಯನರಿತು ನಡೆಯದಿದ್ದರೆ ಅದರ ಅಚ್ಚು ಮುರಿದಿತ್ತು ಕಾಣಾ ಗುಹೇಶ್ವರ ಎಂದಿದ್ದಾರೆ ಅಲ್ಲಮ ಪ್ರಭುದೇವರು.

ಬದುಕಿಗೆ ಮೂರು ನಿಯಂತ್ರಣಗಳು ಬೇಕು. ಆಹಾರದ ನಿಯಂತ್ರಣ, ಇಂದ್ರಿಯಗಳ ಸಂಸ್ಕರಣ,  ಹಾಗೂ ಆಲೋಚನೆಗಳ ಪರಿಷ್ಕರಣ. ಈ ಮೂರನ್ನೂ ನಿಯಂತ್ರಣದಲ್ಲಿಟ್ಟುಕೊಂಡಲ್ಲಿ ನಮ್ಮ ಬದುಕು ಹಸನಾಗಲಿದೆ ಎಂದರು.  ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಚಿಂತನೆಯ ಕುರಿತು ಪ್ರತಿಕ್ರಿಯೆ ನೀಡಿದರು.

error: Content is protected !!