ಮಾಯಕೊಂಡ, ಆ.4- ಮಾಯಕೊಂಡ ಸಮೀಪದ ಬಾಡಾದ ಬಾಲ ಹನುಮಪ್ಪ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎ.ಆರ್. ಮಹದೇವಪ್ಪ ಅವರು ವಯೋನಿವೃತ್ತಿ ಹೊಂದಿದ್ದು, ಇತ್ತೀಚೆಗೆ ಬೀಳ್ಕೊಡಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ಸಂಘರ್ಷಗಳ ನಡುವೆಯೇ ಶೋಷಿತ ಸಮಾಜದ ನೋವುಗಳನ್ನು ಅನುಭವಿಸಿದವರು ಅತ್ತಿಗೆರೆ ಮಹದೇವಪ್ಪ ಎಂದು ಹೇಳಿದರು.
ಜಿಂ.ಪಂ. ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ ಮಾತನಾಡಿ, ಮಹದೇವಪ್ಪನವರ ಸೇವೆಯನ್ನು ಸ್ಮರಿಸಿದರು. ಮುಖಂಡರಾದ ಕತ್ತಲಗೆರೆ ತಿಪ್ಪಣ್ಣ, ಹೂವಿನಮಡು ಚಂದ್ರಪ್ಪ, ಕೆಂಗೋ ಹನುಮಂತಪ್ಪ, ಅತ್ತಿಗೆರೆ ರೇವಣಸಿದ್ದಪ್ಪ, ರಾಘವೇಂದ್ರ ನಾಯ್ಕ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. ಕುಕ್ಕುವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್, ಮುಖಂಡ ಗುರುಶಾಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ನಂದ್ಯಮ್ಮ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎ.ತಿಪ್ಪೇಸ್ವಾಮಿ, ತಾ.ಪಂ. ಮಾಜಿ ಸದಸ್ಯ ಬಾಡದ ರಾಮಚಂದ್ರಪ್ಪ ಮತ್ತಿತರರು ಮಾತನಾಡಿದರು.
ಕೃತಿ ದ್ರಾವಿಡ್, ಕೃಪಾ ದ್ರಾವಿಡ್ ಪ್ರಾರ್ಥಿಸಿದರು. ರಾಘವೇಂದ್ರ ಸ್ವಾಗತಿಸಿದರು. ಎಂ. ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಂದರ ಲೋಕಿಕೆರೆ ನಿರೂಪಿಸಿದರು. ಎಂ. ತಿಮ್ಮಣ್ಣ ವಂದಿಸಿದರು.
ಒಂದೇ ಚೇರ್ ಒಬ್ಬನೇ ಸ್ಟಾಫ್: ಕಳೆದ 35 ವರ್ಷದ ಹಿಂದೆ 1985ರಲ್ಲಿ ಆಡಳಿತ ಮಂಡಳಿ ಕಾಲೇಜು ಆರಂಭಿಸಿದಾಗ ಕೇವಲ ಒಂದು ಬೋರ್ಡ್ ಮಾತ್ರ ಇತ್ತು. ಒಂದೇ ಒಂದು ಫೋಲ್ಡಿಂಗ್ ಛೇರ್ ಬಿಟ್ಟರೆ ಏನೂ ಇರಲಿಲ್ಲ. ನಾನೇ ಪ್ರಿನ್ಸಿಪಾಲ್, ನಾನೇ ಲೆಕ್ಚರರ್, ನಾನೇ ಜವಾನನಾಗಿದ್ದೆ. ಕಸ ಗುಡಿಸಿ, ಬೆಲ್ ಹೊಡೆದುಕೊಂಡು ಅಡ್ಮಿಷನ್ ಮಾಡಿಕೊಳ್ಳುತ್ತಿದ್ದೆ. ಉಪನ್ಯಾಸಕರೆಲ್ಲ ಇಟ್ಟಿಗೆಗಳಂತೆ ಹೊಂದಿಕೊಂಡು ದುಡಿದೆವು. ಎಲ್ಲರ ಸಹಕಾರದೊಂದಿಗೆ ಕಾಲೇಜು ಉಳಿಯಿತು ಎಂದು ಬೀಳ್ಕೊಡುಗೆ ಸ್ವೀಕರಿಸಿದ ಮಹದೇವಪ್ಪನವರು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.