ಪೋಷಕರು ಪರದೇಶದ ವ್ಯಾಮೋಹ ಬಿಡಬೇಕು : ಎಸ್‌ಎಆರ್‌

ಎಂ.ಜಿ.ಶ್ರೀನಿವಾಸರಾವ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ಪ್ರತಿಭಾ ಪುರಸ್ಕಾರ 

ದಾವಣಗೆರೆ, ಆ. 4- ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಿ ವಿದೇಶದಲ್ಲಿ ನೆಲೆಸಬೇಕು ಎನ್ನುವ ಮನೋಭಾವನೆಯನ್ನು ಪೋಷಕರು ಬಿಡಬೇಕು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಕಿವಿಮಾತು ಹೇಳಿದರು.

ನಗರದ ಎಂ.ಜಿ.ಶ್ರೀನಿವಾಸರಾವ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹೇಂದ್ರಕರ್ ಟೆಕ್ಸ್ ಟೈಲ್ಸ್ ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದಿನ ಬಹಳಷ್ಟು ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಿ ಅಮೆರಿಕಾದಲ್ಲಿ ಕೆಲಸ ಮಾಡಬೇಕು ಎಂಬ ಅಭಿಲಾಷೆ ಹೊಂದಿದ್ದಾರೆ. ಅಂಥವರು ಈ ಕೊರೊನಾ ಏನು ಮಾಡಿತು ಎಂದು ಅರಿಯಬೇಕು.  ವಿದೇಶದಲ್ಲಿನ ಬಹಳಷ್ಟು ಡಾಕ್ಟರ್, ಇಂಜಿನಿಯರ್‌ಗಳು ಭಾರತಕ್ಕೆ ಮರಳಿದ್ದಾರೆ. ಅವರ ಸ್ಥಿತಿ ಹೇಳತೀರದಾಗಿದೆ ಎಂದು ಶಾಸಕರು ಹೇಳಿದರು.

ಸಮಾಜದ ಅಧ್ಯಕ್ಷ ಜೆ.ಎಸ್. ಗಂಜಿಗಟ್ಟಿ ಮಾತನಾಡಿ, ಪೋಷಕರು ತಮ್ಮ ಆಸೆ, ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಬಾರದು. ಅವರಿಷ್ಟದ ವಿದ್ಯಾಭ್ಯಾಸ ಕೊಡಿಸಬೇಕು. ಮಕ್ಕಳೂ ಸಹ ಚೆನ್ನಾಗಿ ಓದಬೇಕು. ಕೆಲಸವನ್ನು ಹುಡುಕಿಕೊಂಡು ಹೋಗುವುದಲ್ಲ, ಅದೇ ನಿಮ್ಮನ್ನು ಹುಡುಕಿಕೊಂಡು ಬರುವಂತೆ ಆಗಬೇಕು ಎಂದು ಕರೆ ನೀಡಿದರು. ಸಮಾಜದ ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ್ ಮಾತನಾಡಿ, ಮಕ್ಕಳಲ್ಲಿ ಛಲ, ಗುರಿ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆದರೆ ಬದುಕು ಉತ್ತಮ ಮತ್ತು ಶ್ರೀಮಂತವಾಗಿರುತ್ತದೆ ಎಂದರು.

ಸಮಾಜದ ಪ್ರತಿಭಾನ್ವಿತ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಎಂ.ಜಿ.ಶ್ರೀನಿವಾಸರಾವ್ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಜಿ. ಶ್ರೀನಿವಾಸ್ ರಾವ್, ಮಾಜಿ ಮಹಾಪೌರರಾದ ಎಂ.ಎಸ್. ವಿಠಲ್, ಸಮಾಜದ ಮುಖಂಡರುಗಳಾದ ಕೆ.ಪಿ. ಪಾಂಡು ರಂಗರಾವ್, ಜ್ಞಾನ ದೇವ ಬೊಂಗಾಳೆ, ಜಿ.ಪಿ. ಪರಶು ರಾಮ್ ಗಂಜಿಗಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪರಶುರಾಮ ಹೂವಳೆ ಪ್ರಾರ್ಥಿಸಿದರು. ಜಗದೀಶ್ ನಿರೂಪಿಸಿದರು. ವಿಠಲ ರಾಕುಂಟೆ ವಂದಿಸಿದರು.

error: Content is protected !!