ಜಗಳೂರು ತಾಲ್ಲೂಕಿನಾದ್ಯಂತ ಮಳೆ : ಶೇ.90 ಬಿತ್ತನೆ ಪೂರ್ಣ

ಜಗಳೂರು, ಆ.3- ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಜನವರಿಯಿಂದ ಆಗಸ್ಟ್ ತಿಂಗಳವರೆಗಿನ ವಾಡಿಕೆ ಮಳೆ 230 ಮಿ.ಮೀ, ವಾಸ್ತವಿಕವಾಗಿ ಬಂದಿರುವ ಮಳೆ 366 ಮಿ.ಮೀ, ಜೂನ್ ತಿಂಗಳ ವಾಡಿಕೆ ಮಳೆ 57 ಮಿ.ಮೀ, ವಾಸ್ತವಿಕ ಮಳೆ 79 ಮಿ.ಮೀ., ಜುಲೈ ತಿಂಗಳ ವಾಡಿಕೆ ಮಳೆ 66 ಮಿ.ಮೀ, ವಾಸ್ತವಿಕ ಮಳೆ 173 ಮಿ.ಮೀ. ಒಟ್ಟಾರೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ.

ತಾಲ್ಲೂಕಿನ ಒಟ್ಟಾರೆ ಬಿತ್ತನೆ ಕ್ಷೇತ್ರ 54 ಸಾವಿರ ಹೆಕ್ಟೇರ್. ಈವರೆಗೂ ಸುಮಾರು 41,000 ಹೆಕ್ಟೇರ್ ನಲ್ಲಿ ಶೇಕಡ 90ರಷ್ಟು ಬಿತ್ತನೆಯಾಗಿದೆ. ಉಳಿದಂತೆ ಕಸಬಾ ಹೋಬಳಿ ವ್ಯಾಪ್ತಿಯ ತೊರೆ ಸಾಲು ಗ್ರಾಮಗಳು ಹಾಗೂ ಸೊಕ್ಕೆ ಹೋಬಳಿ ಭಾಗದ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಬಿತ್ತನೆ ಕಾರ್ಯ ನಡೆಯಬೇಕಾಗಿದೆ.

ಮೆಕ್ಕೆಜೋಳ 27,650 ಹೆಕ್ಟೇರ್, ತೊಗರಿ 980, ಶೇಂಗಾ 11694, ಹತ್ತಿ 435 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಉಳಿದಂತೆ ತೋರಿಸಲು ಗ್ರಾಮಗಳಲ್ಲಿ ರಾಗಿ, ಶೇಂಗಾ, ನವಣೆ ಬಿತ್ತನೆ ಕಾರ್ಯ ಆರಂಭವಾಗಿದೆ.

ತಾಲ್ಲೂಕಿನಲ್ಲಿ ಅತಿ ಹೆಚ್ಚು ಬಿತ್ತನೆಯಾಗಿರುವ ಮೆಕ್ಕೆಜೋಳದ ಬೆಳೆ ಸೂಲಂಗಿ ಹೊಡೆಯುವ ಹಂತದಲ್ಲಿದೆ. ರೈತರು ಗೊಬ್ಬರ ಸಿಂಪರಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈಗಾಗಲೇ ಬಿತ್ತನೆಯಾಗಿರುವ ಫಸಲುಗಳು ಉತ್ತಮ ಮಳೆಯಿಂದಾಗಿ ಹಸಿರಿನಿಂದ ನಳನಳಿಸುತ್ತಿವೆ. ರೈತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಆರಂಭದಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿತ್ತು. ಇದೀಗ ಈ ಸಮಸ್ಯೆ ನಿವಾರಣೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ತಾಲ್ಲೂಕಿನಾದ್ಯಂತ ಕೆರೆಗಳು, ಗೋ ಕಟ್ಟೆಗಳು ಹಾಗೂ ಚೆಕ್ ಡ್ಯಾಂಗಳು ಹಾಗೂ ಕೃಷಿ ಹೊಂಡಗಳು ನೀರಿನಿಂದ ತುಂಬಿವೆ. ರಂಗಯ್ಯನ ದುರ್ಗ  ಅರಣ್ಯ ಪ್ರದೇಶ ಸೇರಿದಂತೆ ಕೊಂಡಕುರಿ ವನ್ಯಧಾಮ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಜಲಮೂಲಗಳು ನೀರಿನಿಂದ ತುಂಬಿವೆ.

ಅಂತರ್ಜಲ ಹೆಚ್ಚಳ : ಶಾಸಕ ಎಸ್.ವಿ.ಆರ್. ಸಂತಸ

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಕೆರೆ, ಗೋಕಟ್ಟೆ, ಚೆಕ್ ಡ್ಯಾಂಗಳು ನೀರು ತುಂಬಿದ್ದು, ಅಂತರ್ಜಲ ಹೆಚ್ಚಳವಾಗಿವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಸದಾ ಬರದಿಂದ ತತ್ತರಿಸಿರುವ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತಿರುವ ಫಸಲುಗಳು ನಳನಳಿಸುತ್ತಿವೆ. ರೈತರ ಮುಖದಲ್ಲಿ ಸಂತಸ ಮೂಡಿದೆ. ಈ ವರ್ಷ ವರುಣನ ಕೃಪೆಯಿಂದ ತಾಲ್ಲೂಕಿನಲ್ಲಿ ಉತ್ತಮ ಫಸಲು ಬಂದು ರೈತರ ಆರ್ಥಿಕ ಸ್ಥಿತಿ ಸುಧಾರಣೆಗೊಳ್ಳಲಿದೆ ಎಂದು ಶಾಸಕರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

error: Content is protected !!