ಕೊರೊನಾ ಲೂಟಿ ತನಿಖೆಯಾಗದಿದ್ದರೆ ಬೂತ್ ಹಂತದಿಂದ ಹೋರಾಟ

ದಾವಣಗೆರೆ, ಅ. 3 – ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆ ಹೆಸರಿನಲ್ಲಿ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಲೂಟಿ ಮಾಡಿದ್ದು, ಈ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ಇಲ್ಲವಾದರೆ ಬೂತ್ ಹಂತ ದಿಂದಲೂ ಬೃಹತ್ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಎಚ್ಚರಿಸಿದ್ದಾರೆ.

ಸ್ಪೀಕ್ ಆಫ್ ಕರ್ನಾಟಕ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿ ಕೊರೊನಾ ನಿರ್ವಹಣೆಗೆ 4,167 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ಒಬ್ಬ ಸಚಿವರು 324 ಕೋಟಿ ರೂ. ಎಂದರೆ, ಇನ್ನೊಬ್ಬರು 780 ಕೋಟಿ ರೂ. ಎನ್ನುತ್ತಿದ್ದಾರೆ. ಸರ್ಕಾರ 2,128 ಕೋಟಿ ರೂ.ಗಳ ಲೆಕ್ಕ ನೀಡಿದೆ. ಹಾಗಾದರೆ ಕೊರೊನಾ ನಿರ್ವಹಣೆಗೆ ಮಾಡಿದ ನಿಜವಾದ ವೆಚ್ಚವೆಷ್ಟು? ಎಂದವರು ಪ್ರಶ್ನಿಸಿದ್ದಾರೆ.

ಸರ್ಕಾರವನ್ನು ಪ್ರಶ್ನಿಸುವುದು ಪ್ರತಿಪಕ್ಷದ ಕಾರ್ಯ. ಆದರೆ, ಈ ಕೆಲಸ ಮಾಡಿದ್ದಕ್ಕಾಗಿ ಇದೇ ಮೊದಲ ಬಾರಿಗೆ ಬಿಜೆಪಿ ನೋಟಿಸ್ ಕಳಿಸಿದೆ. ಇದಕ್ಕೆ ಉತ್ತರಿಸಲು ನಾವು ಸಿದ್ಧರಿದ್ದೇವೆ. ಸರ್ಕಾರ ಮೊದಲು ನ್ಯಾಯಿಕ ತನಿಖೆಗೆ ಮುಂದಾಗಲಿ. ಬೇಕಾದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರದ ವಿಷಯಗಳ ಬಗ್ಗೆಯೂ ತನಿಖೆ ನಡೆಸಲಿ ಎಂದವರು ಸವಾಲೆಸೆದರು.

ಜನರು ಕೊರೊನಾ ಕಷ್ಟದಿಂದ ಕಂಗಾಲಾಗಿ ದ್ದಾರೆ, ಬದುಕು ಕಷ್ಟವಾಗಿದ್ದು ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಅವ್ಯವಹಾರ ಹಾಗೂ ಲಂಚ ನಡೆದಿರುವುದು ಸಾಬೀತಾಗಿದೆ. ರಾಜ್ಯ ಸರ್ಕಾರಕ್ಕೆ ಜನರ ರಕ್ಷಣೆಗಿಂತ ಹಣವೇ ಮುಖ್ಯವಾಗಿದೆ ಎಂದವರು ಟೀಕಿಸಿದರು.

ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಔಷಧಿ ನೀಡುವ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ಗಳೂ ಸಹ ಇರದ ಪರಿಸ್ಥಿತಿ ಉಂಟಾಗಿದೆ ಎಂದವರು ಆಕ್ಷೇಪಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೇ ಕೊರೊನಾ ಬಂದಿದೆ. ಅವರನ್ನು ರಕ್ಷಿಸಿಕೊಳ್ಳಲಾಗದವರು ಜನರನ್ನು ಯಾವ ರೀತಿ ಕಾಪಾಡುತ್ತೀರ? ಎಂದವರು ಪ್ರಶ್ನಿಸಿದರು.

ಔಷಧದಲ್ಲೂ ಭ್ರಷ್ಟಾಚಾರ ನಡೆಸಲಾಗಿದ್ದು, ಇದಕ್ಕಿಂತ ಕೆಟ್ಟ ಕೆಲಸ ಇನ್ನೊಂದಿಲ್ಲ. ಆಸ್ಪತ್ರೆಯ ಹಣ ದುರ್ಬಳಕೆ ಮಾಡಿಕೊಂಡಿರುವುದು ದುರ್ದೈವ. ಬಿಜೆಪಿ ಸರ್ಕಾರ ನಡೆಸುವ ಅನರ್ಹತೆ ಕಳೆದುಕೊಂಡಿದೆ ಎಂದು ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಕೊರೊನಾದಲ್ಲಿ ಭ್ರಷ್ಟಾಚಾರ ಮಾಡುವುದೇ ಬಿಜೆಪಿಯ ಸಂಸ್ಕಾರ ಎಂಬಂತಾಗಿದೆ. ಹಳ್ಳಿ ಯಿಂದ ದಿಲ್ಲಿಯವರೆಗೆ ಎಲ್ಲೆಡೆ ಸಮಸ್ಯೆಗಳಿವೆ. 14 ಕೋಟಿ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ರೈತರು, ಮಹಿಳೆಯರು, ಮಕ್ಕಳಿಗೆ ಸಮಾಧಾನ ಇಲ್ಲ ಎಂದರು.

ಪ್ರತಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯ ಮಾಜಿ ಶಾಸಕ ಸಾರ್ವಭೌಮ ಬಗಲಿ ಅವರೇ ಕಳಪೆ ಹಾಗೂ ಬಳಕೆಯಾದ ವೆಂಟಿಲೇಟರ್‌ಗಳನ್ನು ದುಬಾರಿ ವೆಚ್ಚಕ್ಕೆ ಖರೀದಿ ಮಾಡಲಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಬಿಜೆಪಿಗೆ ಸೇರಿದವರೇ ಸರ್ಕಾರದ ಹಗರಣ ನಡೆದಿದೆ ಎನ್ನುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ದಿಕ್ಕೂ ದೆಸೆ, ದೂರದೃಷ್ಟಿ, ಸಂವೇದನಾಶೀಲತೆ ಇಲ್ಲದಂತಾಗಿದೆ. ಸಚಿವರಲ್ಲಿ ಸಮನ್ವಯತೆ ಇಲ್ಲ. ರಾಜ್ ಯಸರ್ಕಾರ ಅಧಿವೇಶನ ಕರೆಯಲು ತಯಾರಿಲ್ಲ. ಆದರೆ, ಕೊರೊನಾ ನೆಪದಲ್ಲಿ ಸರ್ಕಾರದ ಆಸ್ತಿ ಮಾರಾಟ ಮಾಡಲು ಸುಗ್ರೀವಾಜ್ಞೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದ ಅವರು, ಕೊರೊನಾ ಸಮಯದಲ್ಲಿ ಬಿಜೆಪಿ ಸರ್ಕಾರ ಆರ್.ಬಿ.ಐ.ನಿಂದ 8 ಸಾವಿರ ಕೋಟಿ ರೂ. ಸಾಲ ಪಡೆದಿದೆ. ಆ ಮೂಲಕ ರಾಜ್ಯದ ಸಾಲದ ಹೊರೆ ಹೆಚ್ಚಿಸುತ್ತಿದೆ ಎಂದು ದೂರಿದರು.

ಸರ್ಕಾರದ ಕಾರ್ಯ ನಿರ್ವಹಣೆ ಹೆಗ್ಗಣವನ್ನು ಬಿಲದಲ್ಲೇ ಬಿಟ್ಟು ಗುದ್ದು ಮುಚ್ಚಿದ ರೀತಿಯಲ್ಲಿದೆ ಎಂದು ಲೇವಡಿ ಮಾಡಿದ ಅವರು, ಜಿಲ್ಲಾ ಆಸ್ಪತ್ರೆಗಳು ಬಡವರ ರಕ್ತ ಕುಡಿಯುತ್ತಿವೆ. ಜನರು ಹಾದಿ ಬೀದಿಯಲ್ಲಿ ಸಾಯುವ ಪರಿಸ್ಥಿತಿ ಉಂಟಾಗಿದೆ. ಕೊರೊನಾಯೇತರ ಸಮಸ್ಯೆಗಳಿಗೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಶಾಸಕರಾದ ಡಿ.ಜಿ. ಶಾಂತನಗೌಡ, ಹೆಚ್.ಪಿ. ರಾಜೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಿ.ಪಂ. ಸದಸ್ಯ ಬಸವಂತಪ್ಪ, ಓಬಳಪ್ಪ, ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್, ದಿನೇಶ್ ಕೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!