ಮಾನವೀಯ ಸಂಬಂಧಗಳಿಗೆ ಕೊಳ್ಳಿ ಇಟ್ಟ ‘ಕೊರೊನಾ’

ಸಾಣೇಹಳ್ಳಿ ಮಠದ ‘ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯಲ್ಲಿ ಶ್ರೀ ಡಾ. ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ, ಆ.1- ವಿಶ್ವದೆಲ್ಲೆಡೆ ‘ಕೊರೊನಾ’ ರಾಕ್ಷಸನ ಹಾವಳಿಯಿಂದಾಗಿ ಮನುಕುಲ ಭಯಭೀತ ವಾತಾವರಣದಲ್ಲಿದೆ. ಮಾನವೀಯ ಸಂಬಂಧಗಳಿಗೆ ಕೊಳ್ಳಿ ಇಟ್ಟಂತಾಗಿದೆ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾ ಸಾಣೇಹಳ್ಳಿ ಶ್ರೀಮಠದಿಂದ ಆಯೋಜನೆಗೊಂಡಿರುವ `ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆ’ಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಣ್ಣನವರು ‘ಇವ ನಮ್ಮವ ಇವ ನಮ್ಮವ’ ಎಂದು ಎಲ್ಲರನ್ನೂ ಅಪ್ಪಿಕೊಳ್ಳಬೇಕು; ಯಾರನ್ನೂ ಜಾತಿ, ಲಿಂಗ, ಧರ್ಮ, ಭಾಷೆ ಇತ್ಯಾದಿ ಕಾರಣಕ್ಕೆ ದೂರ ಇಡಬಾರದು ಎಂದು ಹೇಳಿದ್ದರೂ, ನಮ್ಮ ಮನೆಯವರೇ ಕೊರೊನಾಕ್ಕೆ ತುತ್ತಾಗಿದ್ದರೆ, ಅವರ ಸಮೀಪ ಹೋಗಲೂ ಭಯಪಡುತ್ತಿದ್ದಾರೆ ಎಂದರು.

ಬಸವಾದಿ ಶಿವಶರಣರ ಆಲೋಚನೆಗಳನ್ನು ಸಹ ಸಾರ್ವಜನಿಕ ಸಮಾರಂಭಗಳ ಮೂಲಕ ಹಂಚಿಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಹಾಗಂತ ವಿವೇಕ, ವಿಚಾರ, ಸದ್ಬೋಧನೆಗೆ ದಿಗ್ಬಂಧನ ಹಾಕಬಾರದಲ್ಲವೇ? ಅದಕ್ಕಾಗಿಯೇ ಅಂತರ್ಜಾಲದಲ್ಲಿ ‘ಮತ್ತೆ ಕಲ್ಯಾಣ’ದ ಮೂಲಕ ಶರಣರ ಆದರ್ಶ ನಡೆ-ನುಡಿಗಳ ಅರಿವು ಮೂಡಿಸುವ ಕಾರ್ಯ 2020 ಆಗಸ್ಟ್ 1 ರಿಂದ 30 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಬಸವಾದಿ ಶಿವಶರಣರಿಗೆ ಜಾತಿ ರಹಿತ, ಸರ್ವ ಸಮಾನತೆಯ ಕಲ್ಯಾಣ ರಾಜ್ಯವನ್ನು ಕಟ್ಟುವುದು ಉದ್ದೇಶವಾಗಿತ್ತು. ಅದಕ್ಕಾಗಿ ಶರಣರು ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರು ಹಾಕಿಕೊಳ್ಳಬೇಕಾಯಿತು. ಆದರೂ ಅಂಜದೆ, ಅಳುಕದೆ `ಕಾಯಕವೆ ಕೈಲಾಸ’ ಎನ್ನುವ ತತ್ವವನ್ನು ಜಾರಿಯಲ್ಲಿ ತಂದು ದುಡಿಯುವವರಲ್ಲಿದ್ದ ಕೀಳರಿಮೆ, ಮೇಲರಿಮೆಯನ್ನು ನಿವಾರಣೆ ಮಾಡುವ ಕೆಲಸಕ್ಕೆ ಗೌರವ ತಂದುಕೊಟ್ಟರು ಎಂದರು.

ಇಂದು ವೈಚಾರಿಕವಾಗಿ, ವೈಜ್ಞಾನಿಕವಾಗಿ ತುಂಬಾ ಸಾಧನೆ ಆಗಿದೆ. ಆದರೆ ನೈತಿಕವಾಗಿ, ಧಾರ್ಮಿಕವಾಗಿ ಮಾನವನ ಬದುಕು ಪಾತಾಳಕ್ಕಿಳಿದಿದೆ. ಹಾಗಾಗಿ ಶರಣರ ಸಮಾಜೋ ಧಾರ್ಮಿಕ ಕ್ರಾಂತಿ ಇಂದು ಮತ್ತೆ ಬೇಕಾಗಿದೆ ಎಂದು ಹೇಳಿದರು.

ಮತ್ತೆ ಕಲ್ಯಾಣ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಉದ್ಘಾಟನಾ ನುಡಿಗಳನ್ನಾಡಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮೋಹನ ಶಾಂತನಗೌಡರ್, ಭಾರತಕ್ಕೆ ಭವ್ಯವಾದ ಇತಿಹಾಸ ಇದೆ. ಕಾಲಕಾಲಕ್ಕೆ ಅನೇಕ ಉದಾತ್ತ, ಧೀಮಂತ ಚೇತನಗಳು ಈ ನೆಲವನ್ನು ಸಂಪದ್ಭರಿತವನ್ನಾಗಿ ಮಾಡಿವೆ. ಇವರಲ್ಲಿ 12 ನೆಯ ಶತಮಾನದ ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು ಮುಂತಾದ ಶರಣ-ಶರಣೆಯರದ್ದು ಅನು ಪಮ ಕೊಡುಗೆ. ಅವರೆಲ್ಲ ಸದಾ ಸ್ಮರಣೀ ಯರು. ಅವರು ನೀಡಿದ ಶರಣ ಸಂಸ್ಕೃತಿ ಅಥವಾ ವಚನ ಸಂಸ್ಕೃತಿಗೆ ಅದರದೇ ಆದ ಸೈದ್ಧಾಂತಿಕ ಅಡಿಪಾಯವಿದೆ.

ಜಾತಿ, ಧರ್ಮ, ವರ್ಣ, ಲಿಂಗ ಮುಂತಾದವುಗಳ ಆಧಾರದ ಮೇಲೆ ಯಾವುದೇ ಪಕ್ಷಪಾತ ಮಾಡಬಾರದೆಂಬುದು ಶರಣರ ಸ್ಪಷ್ಟ ನಿಲುವಾಗಿತ್ತು ಎಂದರು.

ಬಸವಣ್ಣನವರ ಸಮಷ್ಠಿ ಕಲ್ಯಾಣದ ಕನಸನ್ನು ನನಸಾಗಿಸುವತ್ತ ಜನರನ್ನು ಪ್ರೇರೇಪಿಸಲು, ಒಡೆದ ಮನಸ್ಸುಗಳನ್ನು ಒಂದಾಗಿಸಲು, ಶರಣರ ಆದರ್ಶಗಳಿಗೆ ಮರಳುವ ಮತ್ತು ಮರಳಿಸುವ ಪ್ರಕ್ರಿಯೆಯಾಗಿ ‘ಮತ್ತೆ ಕಲ್ಯಾಣ’ ಅಂತರ್ಜಾಲ ಕಾರ್ಯಕ್ರಮ ಪ್ರೇರಣೆ ನೀಡಲಿ ಎಂದರು.

‘ಬಸವಪೂರ್ವ ಸಮಾಜ’ ವಿಷಯ ಕುರಿತಂತೆ ನಿವೃತ್ತ ಪ್ರಾಧ್ಯಾಪಕ ಟಿ ಆರ್ ಚಂದ್ರಶೇಖರ್ ಮಾತನಾಡಿ, ಜಗತ್ತು ವಚನ ಕ್ರಾಂತಿಯನ್ನು ಸಾಮಾಜಿಕ ಕ್ರಾಂತಿ ಎಂದು ಒಪ್ಪಿಕೊಂಡಿದೆ. ಜಗತ್ತಿನ ಇತಿಹಾಸದಲ್ಲಿ ಈ ಕ್ರಾಂತಿ ಒಂದು ಮೈಲಿಗಲ್ಲು ಎಂದರು.

ದೇವರು, ದೇವಸ್ಥಾನದ ಮೌಢ್ಯಾಚರಣೆ, ಶೋಷಣೆಯ ಸ್ವರೂಪವನ್ನು ಬಯಲುಗೊಳಿಸಿ ತಮ್ಮದೇ ಆದ ಸೈದ್ಧಾಂತಿಕ ತತ್ವವನ್ನು ಪ್ರತಿಪಾದಿಸಿದರು. ಕರ್ತವ್ಯವನ್ನು ಮಾಡಿ ಆದರೆ ಫಲವನ್ನು ನಿರೀಕ್ಷಿಸಬೇಡಿ ಎನ್ನುವ ಚಾತುರ್ವರ್ಣ ನೀತಿಗೆ ವಿರುದ್ಧವಾಗಿ ಕಾಯಕಕ್ಕೆ ಪ್ರತಿಫಲ, ಅದು ಈ ಜನ್ಮದಲ್ಲಿಯೇ ಬೇಕು ಎಂದು ಪ್ರತಿಪಾದಿಸದರು ಎಂದು ಹೇಳಿದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಕೆ ಜ್ಯೋತಿ, ಕೆ. ದಾಕ್ಷಾಯಣಿ ಮತ್ತು ಹೆಚ್.ಎಸ್. ನಾಗರಾಜ್ ಸುಶ್ರಾವ್ಯವಾಗಿ ವಚನ ಗೀತೆಗಳನ್ನು ಹಾಡಿದರು. ಅಧ್ಯಾಪಕ ಹೆಚ್ ಎಸ್ ದ್ಯಾಮೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಲ್ಯಾಣ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವಾಟ್ಸಾಪ್ ಮೂಲಕ ಕೇಳಿದ ಹಲವು ಪ್ರಶ್ನೆಗಳಿಗೆ ಪಂಡಿತಾರಾಧ್ಯ ಶ್ರೀಗಳು ಉತ್ತರಿಸಿದರು. ದೇಶ-ವಿದೇಶದ ನೂರಾರು ಜನ ಅಂತರ್ಜಾಲಿಗರು ಕಾರ್ಯಕ್ರಮವನ್ನು ವೀಕ್ಷಿಸಿದರು.

ನಾಳೆ ಸಂಜೆ 6 ಗಂಟೆಗೆ ಉಪನ್ಯಾಸ : ವಚನ ಸಾಹಿತ್ಯ ಕನ್ನಡದ ಉಸಿರು. ಉಪನ್ಯಾಸಕರು: ಮನೇಕಾ ಪಾಟೀಲ್ ಬೀದರ್,  ವೀಕ್ಷಿಸಬಹುದಾದ ಜಾಲತಾಣಗಳು: ಶಿವಸಂಚಾರ ಯೂಟ್ಯೂಬ್: https://youtu.be/bKf2g13Kxqc

error: Content is protected !!