ಫುಟ್‍ಪಾತ್‍ ವ್ಯಾಪಾರಿಗಳಿಂದ ಪ್ರತಿಭಟನೆ

ದಾವಣಗೆರೆ, ನ.4- ನಗರದ ಫುಟ್‍ಪಾತ್‍ಗಳಲ್ಲಿ ವ್ಯಾಪಾರ ಮಾಡಿಕೊಳ್ಳಲು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಜಿಲ್ಲಾ ಫುಟ್‍ಪಾತ್ ವ್ಯಾಪಾರಿಗಳ ಸಂಘ (ಎಐಟಿಯುಸಿ) ದ ನೇತೃತ್ವದಲ್ಲಿ ಫುಟ್‍ಪಾತ್‍ ವ್ಯಾಪಾರಸ್ಥರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. 

ನಗರ ಪಾಲಿಕೆ ಮುಂಭಾಗ ಜಮಾಯಿಸಿದ್ದ ಪ್ರತಿಭಟನಾಕಾರರು, ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೇಯರ್ ಬಿ.ಜಿ. ಅಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. 

40 ವರ್ಷಗಳಿಂದ ನಗರದ ಫುಟ್‍ಪಾತ್‍ಗ ಳಲ್ಲಿ ವ್ಯಾಪಾರ ಮಾಡಿಕೊಂಡು ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ದುಡಿಮೆಯಿಂದ ಬದುಕುತ್ತಿದ್ದಾರೆ. ನಿರುದ್ಯೋಗಿಗಳು ಸಾಲ ಮಾಡಿ ಅಲ್ಪ ಸ್ವಲ್ಪ ಬಂಡವಾಳದಲ್ಲಿ ಬಾಪೂಜಿ ಆಸ್ಪತ್ರೆ ಮುಂಭಾಗ, ಸಿ.ಜಿ. ಆಸ್ಪತ್ರೆ ಕಾಂಪೌಂಡ್‍ನಲ್ಲಿ ಬಿಸಿ ನೀರು, ಎಳೆನೀರು, ಗಂಜಿ, ತಿಂಡಿ, ಊಟ, ಹಣ್ಣುಗಳ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿ ದ್ದಾರೆ. ನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಫುಟ್‍ಪಾತ್ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಿ.ಜಿ. ಆಸ್ಪತ್ರೆ ಹಿಂಭಾಗದ ಕಾಂಪೌಂಡಿಗೆ ಬಾಪೂಜಿ ಆಸ್ಪತ್ರೆ ಮುಂಭಾಗದ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಕಟ್ಟಿಸಿಕೊಡಬೇಕು. ನಗರದಲ್ಲಿ ಹಲವು ವ್ಯಾಪಾರ ಸ್ಥಳಗಳನ್ನು ಗುರುತಿಸಿ ಶಾಶ್ವತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಮಳಿಗೆಗಳನ್ನು ಕಟ್ಟಿಸಿಕೊಡಬೇಕು. ಆಶ್ರಯ ಮನೆಗಳನ್ನು ಕಟ್ಟಿಸಿಕೊಡಬೇಕು. ಈ ಸಂಬಂಧ ನಗರ ಪಾಲಿಕೆ ಆಯುಕ್ತರು ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು, ಉಪಾಧ್ಯಕ್ಷ ಎನ್.ಟಿ. ಬಸವರಾಜ್, ಎಸ್.ಕೆ. ರಹಮತ್ ಉಲ್ಲಾ, ಸಿದ್ದೇಶಿ, ಅಲ್ಲಾಭಕ್ಷಿ, ಶಾಂತಮ್ಮ ತರಕಾರಿ, ವಾಜಿದ್ ಸಾಬ್, ಈರಮ್ಮ, ಸತ್ತಾರ್ ಸಾಬ್, ಗೌರಮ್ಮ, ಎಐವೈಎಫ್‍ನ ಜಿಲ್ಲಾಧ್ಯಕ್ಷ ಕೆರನಹಳ್ಳಿ, ಎಐವೈಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಶಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!