ಬಕ್ರೀದ್‌ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ

ಮಲೇಬೆನ್ನೂರಿನಲ್ಲಿ ಡಿವೈಎಸ್ಪಿ ತಾಮ್ರಧ್ವಜ

ಮಲೇಬೆನ್ನೂರು, ಜು. 30- ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಜುಲೈ 31 ಮತ್ತು ಕೆಲವು ಜಿಲ್ಲೆಗಳಲ್ಲಿ ಆಗಸ್ಟ್ 01 ರಂದು ನಡೆಯಲಿರುವ ಬಕ್ರೀದ್ ಹಬ್ಬದ  ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸರ್ಕಾರ ಆದೇಶಿಸಿದೆ ಎಂದು ಗ್ರಾಮಾಂತರ ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ ತಿಳಿಸಿದರು.

ಅವರು ಪಟ್ಟಣದ ಆರಕ್ಷಕ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿ, ಕೆಲವು ಷರತ್ತಿಗೊಳಪಟ್ಟು ಮಸೀದಿಗಳಲ್ಲಿ ಮಾತ್ರ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ ಎಂದರು.

ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನಗಳಲ್ಲಿ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಇಚ್ಛಿಸುವವರು ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ಮಾಡಬಹುದು. ಒಂದು ವೇಳೆ ಅಧಿಕ ಜನರು ಆಗಮಿಸಿದಲ್ಲಿ ಬ್ಯಾಚ್‍ಗಳನ್ನು ಮಾಡಿಕೊಂಡು ಪ್ರಾರ್ಥನೆ ಮಾಡಬಹುದು ಎಂದರು.

ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸ್ಥಳಗಳಲ್ಲಿ ಅಂದರೆ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರೆ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥ ನೆಯನ್ನು ಆಯೋಜಿಸುವಂತಿಲ್ಲ ಎಂದರು.

ಪಿಎಸ್‍ಐ ವೀರಬಸಪ್ಪ ಕುಸಲಾಪುರ ಮಾತನಾಡಿ, ನಮಾಜ್ ಮಾಡುವವರ ಮಧ್ಯೆ ಕನಿಷ್ಠ 6 ಅಡಿ ಅಂತರವಿರಬೇಕು. ಮಸೀದಿಗಳನ್ನು ಪ್ರವೇಶಿಸುವ ಮುನ್ನ ದೇಹದ ತಾಪಮಾನ ತಪಾಸಣೆ ಕಡ್ಡಾಯವಾಗಿ ಮಾಡಬೇಕು. ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈ ಸರ್‍ಗಳಿಂದ ಶುಚಿಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.

error: Content is protected !!