ಸರ್ಕಾರದ ನಿಯಮದ ಪ್ರಕಾರ ಬಕ್ರೀದ್ ಆಚರಿಸಿ : ಡಿವೈಎಸ್ಪಿ

ಹರಪನಹಳ್ಳಿ, ಜು.30- ದಿನದಿಂದ ದಿನಕ್ಕೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರ್ಕಾರದ ನಿರ್ದೇಶನ ದಂತೆ ಆಚರಿಸುವಂತೆ ಮುಸ್ಲಿಂ ಮುಖಂಡರಲ್ಲಿ ಡಿವೈಎಸ್ಪಿ ಮಲ್ಲೇಶ್‍  ದೊಡ್ಮನಿ ಅವರು ಮನವಿ ಮಾಡಿದ್ದಾರೆ. 

ಬಕ್ರೀದ್ ಹಬ್ಬದ ಪ್ರಯುಕ್ತ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‍ ಆವರಣದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಪ್ರಾರ್ಥನಾ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್‍ ಧರಿಸಬೇಕು, 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿ ಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. ಮಸೀದಿಯಲ್ಲಿ ನಮಾಜ್ ನಿರ್ವಹಿಸುವವರ ಮಧ್ಯೆ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕು, ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್‍ನಿಂದ ಶುಚಿಗೊಳಿಸುವುದು ಮತ್ತಿತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದರು.

ಸಿಪಿಐ ಕೆ.ಕುಮಾರ್ ಮಾತನಾಡಿ, ಬಕ್ರೀದ್ ದಿನ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಚಿಸುವಂತಹ ಮಸೀದಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಸೋಪ್ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.ಆಯಾ ಮಸೀದಿಗಳಲ್ಲಿ ಗರಿಷ್ಟ 50 ಜನ ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಬೇಕು. ಒಂದು ವೇಳೆ ಅಧಿಕ ಜನರು ಆಗಮಿಸಿದಲ್ಲಿ ಎರಡು ಅಥವಾ ಮೂರು ಬ್ಯಾಚ್‍ಗಳಲ್ಲಿ ನಮಾಜ್ ನಿರ್ವಹಿಸಬೇಕು ಎಂದ ಅವರು, ಮಸೀದಿಗಳನ್ನು ಹೊರತುಪಡಿಸಿ ಇತರೆ ಯಾವುದೇ ಸ್ಥಳಗಳಲ್ಲಿ ಅಂದರೆ, ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರೆ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ ಎಂದರು.

ಪುರಸಭೆ ಸದಸ್ಯರಾದ  ಡಿ.ಅಬ್ದುಲ್‍ರೆಹಮಾನ್ ಸಾಬ್ ಮಾತನಾಡಿ, ಕುರುಬಾನಿ ಮಾಡುವಾಗ  ಪಟ್ಟಣದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ, ಶಾಂತಿಯಿಂದ ಯಾರಿಗೂ ತೊಂದರೆ ಯಾಗದಂತೆ ಹಿಂದೂ ಬಾಂಧವರು ಸಹಕಾರ ನೀಡಿ, ಕೊರೊನಾ ಬಂದ ದಿನದಿಂದ ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ವಹಿಸುತ್ತಿದೆ. ಅವರ ಜೊತೆಗೆ ಜನರ ಸಹಕಾರ  ಹಾಗೂ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು  ಎಂದರು.

ಪುರಸಭೆ ಸದಸ್ಯರುಗಳಾದ ಜಾಕೀರ್ ಸರ್ಖಾವಾಸ್, ಎಂ.ಕೆ.ಜಾವೀದ್, ಲಾಟಿ ದಾದಾಪೀರ್  ಅಂಜುಮನ್ ಮಾಜಿ ಅಧ್ಯಕ್ಷ ಸಿ.ಜಾವೀದ್, ಮುಖಂಡರಾದ ಎ.ಮೂಸಾಸಾಬ್, ಯು.ಪಿ.ನಾಗರಾಜ್, ಪೊಲೀಸ್ ಸಿಬ್ಬಂದಿಗಳಾದ ಎಂ.ಮಲ್ಲೇಶ್ ನಾಯ್ಕ, ಕೂಲಹಳ್ಳಿ ಕೊಟ್ರೇಶ್, ಎಂ.ಜಗದೀಶ್, ಸೇರಿದಂತೆ ಮತ್ತಿತರರು ಈ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!