ವಿಪತ್ತುಗಳನ್ನು ಎದುರಿಸಲು ನಾಗರಿಕರು ಸನ್ನದ್ಧರಾಗಿರಬೇಕು

ಹರಿಹರ, ಜು.29- ಅನಿರೀಕ್ಷಿತವಾಗಿ ಎದುರಾಗುವ ವಿಪತ್ತುಗಳನ್ನು ಎದುರಿಸಲು ಸಾರ್ವಜನಿಕರು ಸದಾ ಸನ್ನದ್ಧರಾಗಿರಬೇಕು ಎಂದು ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹೇಳಿದರು. 

ನಗರ ಪೊಲೀಸ್ ಠಾಣೆ ಆವರಣದಲ್ಲಿ ವಿಪತ್ತು ನಿರ್ವಹಣೆ ಕಾರ್ಯದಲ್ಲಿ ಬಳಸಬೇಕಾದ ರಕ್ಷಣಾ ಕವಚಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧತಾ  ಕಾರ್ಯಾಗಾರ ಮಾಡುವುದಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರವಾಹ ಭೀತಿ ಹೆಚ್ಚಾಗುತ್ತಿದೆ. ನದಿಗಳ ಹರಿವು ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಭೀತಿ ಎದುರಾದಾಗ ಮೊದಲೇ ರಕ್ಷಾ ಸಾಮಗ್ರಿಗಳನ್ನು ಸಿದ್ಧಗೊಳಿಸುವುದಕ್ಕೆ ಮುಂದಾಗಿದ್ದೇವೆ ಎಂದರು 

ವಿಪತ್ತು ನಿರ್ವಹಣೆ ಸಮರೋಪಾದಿಯಲ್ಲಿ ನಡೆಯುವ ಕೆಲಸವಾಗಿದೆ. ಹಾಗಾಗಿ ವಿಪತ್ತು ಸನ್ನಿವೇಶ ಎದುರಿಸಲು ಸದಾ ಸಿದ್ಧರಿರಬೇಕಿದೆ. 

ವಿಪತ್ತು ಸಂಭವಿಸಿದ ನಂತರ ಏನು ಮಾಡಬೇಕೆಂದು ಯೋಚಿಸುವುದಕ್ಕಿಂತ ವಿಪತ್ತು ನಡೆಯುವ ಮೊದಲೇ ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಅಪಾರ ಹಾನಿ ಉಂಟಾಗುತ್ತದೆ. 

ಈ ಸಂದರ್ಭದಲ್ಲಿ ನಾಗರಿಕರ ಜೀವ ಮತ್ತು ಆಸ್ತಿ-ಪಾಸ್ತಿ ರಕ್ಷಿಸುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿವಾರಣಾ ಕಾರ್ಯಕ್ಕೆ ಸಿದ್ಧತೆ ಮಾಡಿ ಕೊಡಲಾಗುತ್ತದೆ ಎಂದು ಹೇಳಿದರು 

ನಂತರ ವಿಪತ್ತು ಕಾರ್ಯ ನಿರ್ವಹಣೆ ಅಡಿಯಲ್ಲಿ ಬಳಸಬೇಕಾದ ರಕ್ಷಾ ಸಾಮಗ್ರಿಗಳನ್ನು ತೆಗೆದುಕೊಂಡು ಪ್ರವಾಹ ಭೀತಿ ಎದುರಿಸುವ ಸ್ಥಳಗಳಾದ ರಾಜನಹಳ್ಳಿ, ಹಲಸಬಾಳು, ಹರಿಹರ ತುಂಗಭದ್ರಾ ನದಿ, ದೀಟೂರು, ಪಾಮೇನಹಳ್ಳಿ ಇತರೆ ಗ್ರಾಮಗಳಿಗೆ ತೆರಳಿ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಎಂ.ಶಿವಪ್ರಸಾದ್, ನಗರ ಠಾಣೆ ಪಿಎಸ್ಐ ಶೈಲಶ್ರೀ, ಗ್ರಾಮಾಂತರ ಠಾಣೆಯ ಪಿಎಸ್ಐ ಡಿ.ರವಿಕುಮಾರ್, ಮಲೇಬೆನ್ನೂರು ಠಾಣೆ ಪಿಎಸ್ಐ ವೀರಭದ್ರಪ್ಪ, ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!