ರಾಮಾಯಣ ಗ್ರಂಥ ದೇಶದ ಮೌಲ್ಯ ಹೆಚ್ಚಿಸಿದೆ

ಹರಪನಹಳ್ಳಿ : ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ತೆಗ್ಗಿನಮಠದ ವರಸದ್ಯೋಜಾತ ಶ್ರೀ 

ಹರಪನಹಳ್ಳಿ, ನ.1 – ರಾಮಾಯಣ ಜಗತ್ತಿಗೆ ಸಂದೇಶ ನೀಡಿ ದೇಶದ ಮೌಲ್ಯ ಹೆಚ್ಚಿಸಿದೆ. ವಾಲ್ಮೀಕಿ ಪ್ರತಿಪಾದಿಸಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೆಗ್ಗಿನ ಮಠದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ಮಹರ್ಷಿ ವಾಲ್ಮೀಕಿಯವರ ಜೀವನ ಚರಿತ್ರೆ ಒಳಗೊಂಡಿರುವ ವಿಶೇಷ ಪುರವಣೆ ಬಿಡುಗಡೆ ಮಾಡಿ ಶ್ರೀಗಳು ಆಶೀರ್ವಚನ ನೀಡಿದರು. 

ತ್ಯಾಗ, ಸೇವೆ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂಬುದನ್ನು ರಾಮಾಯಾಣ ಮಹಾ ಕಾವ್ಯದ ಮೂಲಕ ಇಡೀ ಜಗತ್ತಿಗೆ  ಮಹರ್ಷಿ ವಾಲ್ಮೀಕಿಯವರು ತೋರಿಸಿದ್ದಾರೆ. ಪಿತೃವಾಕ್ಯ ಪರಿಪಾಲನೆ, ಸಹೋದರತ್ವ, ಸ್ತ್ರೀಯರಿಗೆ ಗೌರವ, ದುಷ್ಟ ಸಂಹಾರ, ಭಕ್ತಿ, ಏಕಪತ್ನಿತ್ವ, ಪರಿಸರ ಸಂರಕ್ಷಣೆಯಂತಹ ಅನೇಕ ನೀತಿಗಳನ್ನೊಳಗೊಂಡಿರುವ ರಾಮಾಯಣದ ನೀತಿಗಳನ್ನು ಅನುಸರಿಸಿ ಜಯಂತಿಯ ಮಹತ್ವವನ್ನು ಅರಿಯಿರಿ ಎಂದರು. 

ತೆಗ್ಗಿನ ಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಮಹಾನ್ ಗ್ರಂಥಗಳು ಮಾನವ ಸರ್ವ ಕಾಲದಲ್ಲಿ ಅಳವಡಿಸಿಕೊಳ್ಳಬಹುದಾದ ಮೇರು ಗ್ರಂಥಗಳಾಗಿವೆ. ಕೆಳ ವರ್ಗದ ಸಮುದಾಯದಲ್ಲಿ ಅನಕ್ಷರತೆಯ ಪ್ರಮಾಣ ಹೆಚ್ಚಿರುವುದರಿಂದ ಅವರಿಗೆ ಶಿಕ್ಷಣದ ಅರಿವು ಬರಬೇಕು ಎಂದರು.

ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ರಾಮಾಯಾಣ ದಂತಹ ಮಹಾಕಾವ್ಯ ಕೊಟ್ಟ ಆದಿಕವಿ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯ ಸಾಂಸ್ಕೃತಿಕ ನಾಯಕರಾಗಿದ್ದಾರೆ. ರಾಮಾಯಾಣದಲ್ಲಿರುವ ಪ್ರಜಾಪ್ರಭುತ್ವದ ಕಲ್ಪನೆ ಪ್ರಸ್ತುತ ರಾಜಕಾರಣದಲ್ಲಿ ಅಳವಡಿಸಿ ಕೊಂಡಾಗ ರಾಮರಾಜ್ಯ ಕಟ್ಟಬಹುದಾಗಿದ್ದು ಮಹನೀಯರ ಜಯಂತಿಗಳನ್ನು ಜಾತ್ಯತೀತವಾಗಿ ಆಚರಿಸಬೇಕಿದೆ ಎಂದರು.

ಏಕಲವ್ಯ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ರಾಯದುರ್ಗದ ಪ್ರಕಾಶ, ಕಾರ್ಯದರ್ಶಿ ಶಿವರಾಜ, ಮುಖಂಡರಾದ ಆಲಮರಸೀಕೆರೆ ಟಿ.ಬಿ.ರಾಜು, ಮೈದೂರು ಮಾರುತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!