ನಿತ್ಯದ ವ್ಯವಹಾರದಲ್ಲಿ ಕನ್ನಡ ಬಳಸುವ ದೃಢ ನಿರ್ಧಾರ ಅಗತ್ಯ

ಹರಿಹರದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವದಲ್ಲಿ  ಶಾಸಕ ಎಸ್. ರಾಮಪ್ಪ

ಹರಿಹರ, ನ.1- ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಜೀವನ ವಿಧಾನ, ಪರಿಸರ, ಕಲೆ, ಸಾಹಿತ್ಯ, ತ್ಯಾಗ, ಶ್ರಮ ಹಾಗೂ ಬಲಿದಾನದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ತಿಳಿಸಲು ಶಿಕ್ಷಣದ ಅವಶ್ಯಕತೆಯಿದೆ ಎಂದು ಶಾಸಕ ಎಸ್. ರಾಮಪ್ಪ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಮೈದಾನದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಇಂದು ನಡೆದ 65 ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ಕನ್ನಡದ ವಾತಾವರಣವನ್ನು ಉಳಿಸಿ ಕೊಳ್ಳಬೇಕು. ಮಕ್ಕಳಿಗೆ ಯಾವುದೇ ಅಳಕು, ಕೀಳರಿಮೆಯಿ ಲ್ಲದೆ ಕನ್ನಡವನ್ನು ಸಹಜವಾಗಿ ಬಳಸುವ ಮನೋಭಾವ ರೂಪಿಸಿಕೊಳ್ಳಲು ಮನೆಯಲ್ಲಿ ಪೂರಕವಾದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವ ದೃಢ ನಿರ್ಧಾರವನ್ನು ಮಾಡಿದರೆ ಕನ್ನಡ ಭಾಷೆಯ ಆತಂಕವನ್ನು ಹೋಗಲಾಡಿಸಬಹುದು ಎಂದು ಹೇಳಿದರು.

ಈಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕನ್ನಡಪರ ಹೋ ರಾಟಗಳ ಅವಶ್ಯಕತೆ ಈಗಲೂ ಇದೆ. ಯಾವುದೇ ಕನ್ನಡಪರ ಚಟುವಟಿಕೆಗಳಿಗೆ ಜನರು ಆಸಕ್ತಿ ತೋರಿಸುತ್ತಿಲ್ಲ. ಆದ್ದರಿಂದ ಮಕ್ಕಳಿಗೆ ತಾಯಿ ಭಾಷೆಯ ಮಹತ್ವ, ಸಂಸ್ಕೃತಿಯ ಹಿರಿಮೆ, ಆದರ್ಶ ವ್ಯಕ್ತಿಗಳ ಬಗ್ಗೆ ಶಿಕ್ಷಣದ ಮೂಲಕ ತಿಳಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಕನ್ನಡ ಬಹಿರಂಗದ ಬದಲು ಅಂತರಂಗವಾಗಿ ಕನ್ನಡ ಡಿಂಡಿಮ ಮೊಳಗಬೇಕಾಗಿದೆ. ಮನೆಯಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು, ಕನ್ನಡದಲ್ಲಿ ಸಹಿ ಮಾಡುವು ದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾ ಅಧ್ಯಕ್ಷ ಎಸ್.ಹೆಚ್. ಹೂಗಾರ್ ಮಾತನಾಡಿ, ಕರ್ನಾಟಕ ಏಕೀಕರಣವಾಗಿ ಆರೂವರೆ ದಶಕಗಳು ಕಳೆದರೂ ಸಹ ನಿರಂತರ ಕನ್ನಡದ ಬೆಳವಣಿಗೆಗೆ ಹೋರಾಟಗಳು ನಡೆಯುತ್ತಿವೆ. ಆದರೆ, ಕನ್ನಡದ ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ. ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಪ್ರಕಟಿಸಿ ದಶಕ ಕಳೆದಿದೆ. ಆದರೆ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಇಂದಿಗೂ ಸಾಧ್ಯವಾಗಿಲ್ಲ. ಇದು ಕನ್ನಡಿಗರ ದುರ್ದೈವದ ಸಂಗತಿಯಾಗಿದೆ ಮತ್ತು ಡಾ. ಸರೋಜಿನಿ ಮಹಿಷಿ ವರದಿ ಕೂಡ ಮೂರು ದಶಕಗಳು ಕಳೆದರೂ ಸಹ ಅನುಷ್ಠಾನಕ್ಕೆ ಬರದಿರುವುದು ವಿಷಾದನೀಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹೊಸದಾಗಿ ಕಾರ್ಖಾನೆಗಳು ಪ್ರಾರಂಭಗೊಳ್ಳಲಿದ್ದು, ಅವುಗಳಲ್ಲಿ ಸ್ಥಳಿಯ ನಿರುದ್ಯೋಗಿಗಳಿಗೆ ಕೆಲಸವನ್ನು ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಗಳನ್ನು ಹಾಕಬೇಕು ಎಂದು ಹೇಳಿದರು.

ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಎಪಿಎಂಸಿ ಅಧ್ಯಕ್ಷ ಹನುಮಂತಪ್ಪ,  ಪೌರಾಯುಕ್ತೆ ಎಸ್ ಲಕ್ಷ್ಮಿ, ಇಓ ಗಂಗಾಧರನ್, ಸಿಪಿಐ ಎಸ್. ಶಿವಪ್ರಸಾದ್, ಬಿಇಓ ಬಸವರಾಜಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಪರಮೇಶ್ವರಪ್ಪ, ಆರೋಗ್ಯ ಇಲಾಖೆಯ ಡಾ. ಚಂದ್ರ ಮೋಹನ್, ತೋಟಗಾರಿಕೆ ಇಲಾಖೆಯ ರೇಖಾ,  ನಗರ ಸಭೆ ಸದಸ್ಯರಾದ ಎಂ.ಎಸ್. ಬಾಬುಲಾಲ್, ವಿಜಯ ಮಾಲತೇಶ್, ಶಿಕ್ಷಕ ರಮೇಶ್ ಮತ್ತಿತರರು  ಹಾಜರಿದ್ದರು.

ರಾಷ್ಟ್ರಗೀತೆ, ನಾಡಗೀತೆ, ರೈತಗೀತೆಯನ್ನು ಗಿರಿಜಮ್ಮ ಮತ್ತು ಸಂಗಡಿಗರು ಹಾಡಿದರು. ಬಿಇಓ ಬಸವರಾಜಪ್ಪ ಸ್ವಾಗತಿಸಿದರು.

error: Content is protected !!