ಪಾಲಿಕೆ ಎಲ್ಲಾ ವಾರ್ಡುಗಳಿಗೂ ಸಮಾನ ಅನುದಾನಕ್ಕೆ ಆಗ್ರಹ

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅವರಿಗೆ ಪಾಲಿಕೆ ವಿಪಕ್ಷ ಕಾಂಗ್ರೆಸ್‌ ಮನವಿ ಪತ್ರ ಸಲ್ಲಿಕೆ

ದಾವಣಗೆರೆ, ಜು.27- ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಗೆ (ಎಂ.ಜಿ.ಎನ್.ವಿ.ವೈ) ಪ್ರಸ್ತಾಪಿತ ಕ್ರಿಯಾ ಯೋಜನೆಯನ್ನು ಕೈಬಿಟ್ಟು ಎಲ್ಲಾ ವಾರ್ಡ್‌ಗಳಿಗೂ ಸಮನಾಗಿ ಅನುದಾನ ಹಂಚಿಕೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಅವರಿಗೆ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರ ನೇತೃತ್ವದಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮನವಿ ಸಲ್ಲಿಸಿದರು. 

ಈ ಹಿಂದೆ ಇದ್ದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಉದ್ದೇಶಿಸಿರುವ ಸಭೆಗೆ ತಯಾರಿಸಿರುವ ಕರಡು ಕ್ರಿಯಾ ಯೋಜನೆಯ ಮಾಹಿತಿಯನ್ನು ಪಡೆದು ಪರಿಶೀಲಿಸಿದಾಗ ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ
ವ್ಯಾಪ್ತಿಯಲ್ಲಿ ವಿವಿಧ ವಾರ್ಡ್‌ಗಳಿಗೆ ಅನುದಾನವನ್ನು ಸಮನಾಗಿ ಹಂಚಿಕೆ ಮಾಡದೇ ಇರುವುದರ
ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಯುಕ್ತರ ಗಮನಕ್ಕೆ ತರಲಾಗಿದ್ದು, ತಾವು ಆಯುಕ್ತರಿಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಮೌಖಿಕವಾಗಿ ನಿರ್ದೇಶನ ನೀಡಿದ್ದರೂ ಸಹ, ಅಧಿಕಾರಿಗಳು ಮತ್ತೆ ಪ್ರಸ್ತಾಪಿತ ಯೋಜನೆಗೆ ಅನುಮತಿ ಪಡೆದಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು. 

ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 9.6.2020 ರಂದು ಸಭೆ ನಡೆದಿದ್ದು, ಸದರಿ ಸಭೆಯ ವಿಷಯವು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ಗಮನಕ್ಕೆ ಬಂದಿರುವುದಿಲ್ಲ ಹಾಗೂ ಸದರಿ ಶಾಸಕರ ಸಮಿತಿಯ ಸಭೆಯ ನಡವಳಿಕೆಗಳಿಗೆ ಶಾಸಕರ ಸಹಿ ಕೂಡ ಮಾಡಿಸದೇ ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ ಎಂದು ಸಚಿವರಿಗೆ ದೂರು ನೀಡಿದರು.

ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆಲವು ವಾರ್ಡ್‌ಗಳಿಗೆ ಕೇವಲ 30 ರಿಂದ 40 ಲಕ್ಷ ರೂ.ಗಳ ವರೆಗೆ ಅನುದಾನವನ್ನು ಕ್ರಿಯಾ ಯೋಜನೆಯಲ್ಲಿ ನೀಡಿದ್ದು, ಉಳಿದ ವಾರ್ಡ್‌ಗಳಿಗೆ ಅಂದಾಜು 100 ಲಕ್ಷ ರೂ. ಗಳಿಂದ 515 ಲಕ್ಷ ರೂ. ಗಳವರೆಗೆ ಕ್ರಿಯಾ ಯೋಜನೆಯಲ್ಲಿ ಹಂಚಿಕೆ ಮಾಡಲಾಗಿದೆ. ಕೇವಲ 30 ಲಕ್ಷ ರೂ. ಗಳಿಂದ 40 ಲಕ್ಷ ರೂ. ಗಳವರೆಗೆ ಹಂಚಿಕೆ ಮಾಡಿರುವ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೇವಲ ಮರೀಚಿಕೆ ಆಗಲಿದ್ದು, ತಾರತಮ್ಯ ಎಸಗಿದಂತಾಗಲಿದೆ ಎಂದರು.

ಈಗಾಗಲೇ ಸಲ್ಲಿಸಲಾಗಿರುವ ಕ್ರಿಯಾ ಯೋಜನೆಯನ್ನು ತಡೆಗಟ್ಟಿ ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್‌ಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಸದಸ್ಯರ ಈ ಮನವಿಗೆ ಸ್ಪಂದಿಸಿದ ಜಿಲ್ಲಾ ಸಚಿವರು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಚಮನ್‌ಸಾಬ್, ಮಂಜುನಾಥ್ ಗಡಿಗುಡಾಳ್, ಉದಯ್‌ಕುಮಾರ್, ಉಮೇಶ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ ಮತ್ತಿತರರಿದ್ದರು.

error: Content is protected !!